ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಕಾರಿನಲ್ಲಿ ಬಂದ ಯುವಕ ಹಲ್ಲೆ ಮಾಡಿರುವ ಘಟನೆ ಕೆಂಗೇರಿಯ ನಾಗದೇವನಹಳ್ಳಿ ವಿನಾಯಕ ಲೇಔಟ್‌ನಲ್ಲಿ ನಡೆದಿದೆ.
ಫೆಬ್ರವರಿ 22ರಂದು ಸಂಜೆ 5.20ರ ಸುಮಾರಿಗೆ ಈ ಘಟನೆ ನಡೆದಿದ್ದು, ನಂಜುಂಡಪ್ಪ (65) ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಕಾರಿನಲ್ಲಿ ಬಂದ ನವೀನ್ ಎಂಬ ಯುವಕ ಹಾರ್ನ್ ಮಾಡಿದ್ದಾನೆ. ನಂಜುಂಡಪ್ಪ ಪಕ್ಕದಲ್ಲೇ ದೊಡ್ಡ ರಸ್ತೆ ಇದೆ, ಅಲ್ಲಿ ಹೋಗಿ ಎಂದು ಹೇಳಿದ್ದು, ಇದಕ್ಕೆ ರೊಚ್ಚಿಗೆದ್ದ ನವೀನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಬಂದ ನವೀನ್‌ನ ತಾಯಿ-ತಂದೆ ಸಮಾಧಾನಪಡಿಸಲು ಯತ್ನಿಸಿದರೂ, ಆತ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ. ಘಟನೆಯ ಬಳಿಕ ಸುಮಾರು 200 ಮೀಟರ್ ದೂರ ನಡೆದುಕೊಂಡು ಹೋಗುತ್ತಿದ್ದ ನಂಜುಂಡಪ್ಪರ ಬಳಿಗೆ ಮತ್ತೆ ಕಾರು ಚಲಾಯಿಸಿ ಹೋಗಿ ಅಡ್ಡಹಾಕಿ ಮತ್ತೊಮ್ಮೆ ಹಲ್ಲೆ ನಡೆಸಿದ್ದಾನೆ. ಸುಮಾರು 100 ಮೀಟರ್ ದೂರವರೆಗೆ ಅಟ್ಟಾಡಿಸಿಕೊಂಡು ಹೋಗಿ ರಸ್ತೆ ಮೇಲೆ ಬೀಳಿಸಿ ಹೊಡೆದಿದ್ದಾನೆ. ಅಲ್ಲದೆ ಎಳೆದಾಡಿ ದರ್ಪ ತೋರಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಇದನ್ನೂ ಓದಿ : ಜಾರ್ಖಂಡ್‌ನಿಂದ 7 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬುಲೆನ್ಸ್ ಪತನ



















