ಮುಂಬೈ : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕೇವಲ ಸಿನಿಮಾಗಳ ವಿಷಯದಲ್ಲಿ ಮಾತ್ರವಲ್ಲದೆ, ಆಹಾರದ ವಿಚಾರದಲ್ಲೂ ಅಪ್ಪಟ ‘ಬಾಹುಬಲಿ’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮುಂಬೈನಲ್ಲಿ ನಡೆಯುತ್ತಿದ್ದ ‘ಆದಿಪುರುಷ್’ ಸಿನಿಮಾ ಚಿತ್ರೀಕರಣದ ವೇಳೆ ತಮಗೆ ಇಷ್ಟವಾದ ಚೆನ್ನೈ ಶೈಲಿಯ ಆಹಾರವನ್ನು ಸವಿಯಲು ಪ್ರಭಾಸ್ ವಿಮಾನದ ಮೂಲಕ ಊಟ ತರಿಸಿಕೊಂಡಿರುವ ಸ್ವಾರಸ್ಯಕರ ಸಂಗತಿ ಈಗ ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಡೆದ ವಿಡಿಯೋ ಸಂವಾದವೊಂದರಲ್ಲಿ ಈ ಕುರಿತು ಮಾತನಾಡಿರುವ ಪ್ರಭಾಸ್, ಅಂದು ಚಿತ್ರೀಕರಣದ ನಡುವೆ ನನಗೆ ವಿಶೇಷವಾಗಿ ಏನಾದರೂ ತಿನ್ನಬೇಕು ಅನ್ನಿಸಿತು ಎಂದಿದ್ದಾರೆ. ಕೂಡಲೇ ಅವರು ಅಂದು ಸೆಟ್‌ನಲ್ಲಿ ‘ಚೀಟ್ ಡೇ’ (ಪಥ್ಯ ಬಿಡುವ ದಿನ) ಎಂದು ಘೋಷಿಸಿ, ಅಂದು ಯಾರೂ ತಮ್ಮ ಮಧ್ಯಾಹ್ನದ ಊಟವನ್ನು ಮುಂಚಿತವಾಗಿ ಸೇವಿಸಬಾರದು, ಎಲ್ಲರಿಗೂ ತಾನೇ ವಿಶೇಷ ಔತಣ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಚಿತ್ರತಂಡದ ಸದಸ್ಯರೆಲ್ಲರೂ ಪ್ರಭಾಸ್ ನೀಡುವ ರುಚಿಕರ ಊಟಕ್ಕಾಗಿ ಕಾತರದಿಂದ ಕಾಯುತ್ತಿದ್ದರು.
ವಿಮಾನದಲ್ಲಿ ಬಂತು ಬಿಸಿಬಿಸಿ ಊಟ
ಗಂಟೆಗಳು ಕಳೆದರೂ ಊಟ ಬರಲಿಲ್ಲ, ಹಲವರಿಗೆ ಹೊಟ್ಟೆ ತಾಳ ಹಾಕಲು ಶುರುವಾಗಿತ್ತು. ಅಲ್ಲೇ ಅಕ್ಕ ಪಕ್ಕ ಇರುವ ಹೋಟೆಲ್‌ನಿಂದ ಊಟ ಬರಬಹುದು ಎಂದೇ ಭಾವಿಸಿ ಎಲ್ಲರೂ ಕಾಯುತ್ತಿದ್ದರು. ಆದರೆ ಅಸಲಿ ವಿಷಯವೆಂದರೆ, ಪ್ರಭಾಸ್ ಮುಂಬೈನ ಸ್ಥಳೀಯ ಹೋಟೆಲ್‌ಗಳಿಂದ ಊಟ ತರಿಸುವ ಬದಲು ಅಪ್ಪಟ ಚೆನ್ನೈ ಶೈಲಿಯ ಊಟಕ್ಕಾಗಿ ಆರ್ಡರ್ ಮಾಡಿದ್ದರು. ಚೆನ್ನೈನಿಂದ ಬಿಸಿಬಿಸಿ ಊಟವನ್ನು ಕ್ಯಾರಿಯರ್‌ಗಳಲ್ಲಿ ತುಂಬಿಸಿ, ಒಬ್ಬ ವ್ಯಕ್ತಿಯ ಮೂಲಕ ವಿಮಾನದಲ್ಲಿ ಮುಂಬೈಗೆ ರವಾನಿಸಲಾಗಿತ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಚಿತ್ರೀಕರಣದ ಸ್ಥಳಕ್ಕೆ ಬಂದ ಆ ಊಟವು ಇನ್ನೂ ಬಿಸಿಯಾಗಿತ್ತು ಮತ್ತು ಅಪ್ಪಟ ಸ್ವಾದದಿಂದ ಕೂಡಿತ್ತು ಎಂದು ಪ್ರಭಾಸ್ ನೆನಪಿಸಿಕೊಂಡಿದ್ದಾರೆ.
ಮೂಲ ಸ್ವಾದಕ್ಕೆ ಮರುಳಾದ ಪ್ರಭಾಸ್
“ಇದು ನಿಮಗೆ ಸ್ವಲ್ಪ ಹುಚ್ಚುತನ ಎಂದು ಅನಿಸಬಹುದು, ಆದರೆ ನನಗೆ ಅಸಲಿ ಮತ್ತು ಅಪ್ಪಟ ಸ್ವಾದಗಳೆಂದರೆ ಪಂಚಪ್ರಾಣ” ಎಂದು ಪ್ರಭಾಸ್ ಹೇಳಿದ್ದಾರೆ. ಹೈದರಾಬಾದ್ ಬಿರಿಯಾನಿ ಇಷ್ಟವಾದರೂ, ಚೆನ್ನೈ ಬಿರಿಯಾನಿಯ ಆ ಹುಳಿ ಮಿಶ್ರಿತ ರುಚಿ ನನಗೆ ಹೆಚ್ಚು ತೃಪ್ತಿ ನೀಡುತ್ತದೆ ಎಂಬುದು ಅವರ ಅಭಿಪ್ರಾಯ. ಆದರೆ ಇವೆಲ್ಲದಕ್ಕಿಂತ ಹೆಚ್ಚಾಗಿ ನನಗೆ ‘ರೊಯ್ಯಲ ಪುಲಾವ್’ (ಸಿಗಡಿ ಪುಲಾವ್) ಎಂದರೆ ಪ್ರಾಣ ಎಂಬ ವಿಷಯವನ್ನೂ ಅವರು ಇದೇ ವೇಳೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ‘ಲೋಕಾ’ ಬಲೆಗೆ ಬಿದ್ದ BJP ಶಾಸಕ ಚಂದ್ರು ಲಮಾಣಿ!



















