ಬೀದರ್ : ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಭಗವಂತ್ ಖೂಬಾ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಬಿರಾದಾರ ಎಂಬುವವರು ದೂರು ನೀಡಿದ್ದು, ಹೀಗಾಗಿ ಮಾಜಿ ಕೇಂದ್ರ ಸಚಿವರ ವಿರುದ್ಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಖಂಡ್ರೆ ಅವರನ್ನ ನಿಂದಿಸಿದ ವಿಚಾರಕ್ಕೆ ಖೂಬಾ ವಿರುದ್ಧ ಇದೀಗ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖೂಬಾ ವಿರುದ್ಧ ದೂರು ನೀಡಿದ ಹಿನ್ನೆಲೆ ಭಾಲ್ಕಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಅನುಮತಿ ಪಡೆದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಖಂಡ್ರೆ ಬಗ್ಗೆ ಭಗವಂತ ಖೂಬಾ ಹೇಳಿದ್ದೇನು?
‘ಈಶ್ವರ್ ಖಂಡ್ರೆ ಅವನತಿ ಶುರುವಾಗಿದೆ, ನೀನು ಸತ್ತರೆ ನಿನಗೆ ಮೋಕ್ಷ ಸಿಗುವುದಿಲ್ಲ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕ್ರಮ ಮಾಡ್ಕೊಳ್ತಿದ್ದೀಯಾ, ನೀನು ಹಿಜಡಾ ಇದ್ದೀಯಾ ಎಂದೆಲ್ಲಾ ಏಕವಚನದಲ್ಲೇ ಈಶ್ವರ್ ಖಂಡ್ರೆ ಬಗ್ಗೆ ಭಗವಂತ ಖುಬಾ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡ ದೂರು ಕೊಟ್ಟಿದ್ದು, ಎಫ್‌ಐಆರ್‌ನಲ್ಲಿ ಆರೋಪಗಳು ಉಲ್ಲೇಖವಾಗಿದೆ.
ಫೆಬ್ರವರಿ 7 ರಂದು ನಡೆದ ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ವೇಳೆ ಭಗವಂತ್ ಖೂಬಾ ಪ್ರತಿಭಟನೆ ನಡೆಸಿದ್ದು, ಈ ವೇಳೆ ಭಗವಂತ್ ಖೂಬಾ ಸೇರಿದಂತೆ ಬಿಜೆಪಿ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರು ವಶಕ್ಕೆ ಪಡೆದ ಬಳಿಕ ಫೇಸ್ಬುಕ್ ಲೈವ್ ಬಂದಿದ್ದ ಖೂಬಾ ಅವರು, ಈಶ್ವರ್ ಖಂಡ್ರೆ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಘಟನೆ ನಡೆದ 9 ದಿನಗಳ ಬಳಿಕ ಖೂಬಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಬಿರಾದಾರ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾ ಕೋಚ್ ಹುದ್ದೆ ತೊರೆಯುತ್ತಾರಾ ಗೌತಮ್ ಗಂಭೀರ್? ರಾಜಸ್ಥಾನ ರಾಯಲ್ಸ್‌ನಿಂದ ಸಿಇಒ ಆಫರ್!



















