ವಾಷಿಂಗ್ಟನ್ : ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಸಾವಿನ ನಂತರವೂ ಅವನ ಸುತ್ತಲಿನ ರಹಸ್ಯಗಳು ಒಂದೊಂದಾಗಿ ಹೊರಬರುತ್ತಲೇ ಇವೆ. ಇತ್ತೀಚೆಗೆ ಬಹಿರಂಗಗೊಂಡ ಎಪ್ಸ್ಟೀನ್ ಫೈಲ್ಸ್‌ನಲ್ಲಿ ಆತ ತನ್ನ ನರ್ಸರಿಯಲ್ಲಿ ‘ಟ್ರಂಪೆಟ್ ಪ್ಲಾಂಟ್’ ಮಾದರಿಯ ಗಿಡಗಳನ್ನು ಬೆಳೆಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ಸಸ್ಯಗಳು ಕೇವಲ ಅಲಂಕಾರಿಕವಾಗಿರದೆ, ಮನುಷ್ಯನ ಸ್ವತಂತ್ರ ಆಲೋಚನಾ ಶಕ್ತಿಯನ್ನೇ ಹರಣ ಮಾಡುವ ‘ಸ್ಕೋಪೋಲಮೈನ್’ ಎಂಬ ಅಮಲು ಪದಾರ್ಥವನ್ನು ಹೊಂದಿರುವುದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸ್ವನಿಯಂತ್ರಣ ತಪ್ಪಿಸುವ ‘ಡೆವಿಲ್ಸ್ ಬ್ರೆತ್’ ಔಷಧ
ಬಹಿರಂಗಗೊಂಡ ಇಮೇಲ್ ದಾಖಲೆಗಳ ಪ್ರಕಾರ, 2015ರಲ್ಲಿ ಎಪ್ಸ್ಟೀನ್‌ಗೆ ಈ ಸಸ್ಯದ ಔಷಧೀಯ ಗುಣಗಳ ಬಗ್ಗೆ ಮಾಹಿತಿ ರವಾನೆಯಾಗಿತ್ತು. ‘ಸ್ಕೋಪೋಲಮೈನ್’ ಎಂಬುದು ಕೊಲಂಬಿಯಾದ ಕಾಡುಗಳಲ್ಲಿ ಬೆಳೆಯುವ ಸಸ್ಯದಿಂದ ತೆಗೆಯುವ ದ್ರವ್ಯವಾಗಿದ್ದು, ಇದನ್ನು ಸೇವಿಸಿದ ವ್ಯಕ್ತಿಗಳು ತಮ್ಮ ಹತೋಟಿ ಕಳೆದುಕೊಂಡು ಎದುರಿಗಿದ್ದವರು ಹೇಳಿದಂತೆ ಕೇಳುವ ‘ಜಾಂಬಿ’ಗಳಂತಾಗುತ್ತಾರೆ. ಈ ಸಸ್ಯವನ್ನು ‘ಡೆವಿಲ್ಸ್ ಬ್ರೆತ್’ (ರಾಕ್ಷಸನ ಉಸಿರು) ಎಂದೂ ಕರೆಯಲಾಗುತ್ತದೆ. ಎಪ್ಸ್ಟೀನ್ ತನ್ನ ಸಂತ್ರಸ್ತರ ಮೇಲೆ ಇದನ್ನು ಬಳಸುತ್ತಿದ್ದನೇ ಎಂಬ ಅನುಮಾನ ದಟ್ಟವಾಗಿದೆ. 2022ರಲ್ಲಿ ಸಂತ್ರಸ್ತರೊಬ್ಬರು ಈ ಅಮಲು ಪದಾರ್ಥದಿಂದ ತಮಗಾದ ಅರೆಪ್ರಜ್ಞಾವಸ್ಥೆಯ ಅನುಭವವನ್ನು ಉಲ್ಲೇಖಿಸಿದ್ದರು ಎನ್ನುವುದು ಗಮನಾರ್ಹ.
ಹಿಂದೂ ಧರ್ಮದಲ್ಲಿ ದತ್ತೂರಿಗಿದೆ ಪವಿತ್ರ ಸ್ಥಾನ
ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಅಪಾಯಕಾರಿ ಮಾದಕ ದ್ರವ್ಯವಾಗಿ ಗುರುತಿಸಿಕೊಂಡಿದ್ದರೆ, ಭಾರತದ ಹಿಂದೂ ಸಂಪ್ರದಾಯದಲ್ಲಿ ಈ ಟ್ರಂಪೆಟ್ ಆಕಾರದ ದತ್ತೂರಿ ಹೂವಿಗೆ ವಿಭಿನ್ನ ಹಾಗೂ ಪವಿತ್ರವಾದ ಸ್ಥಾನವಿದೆ. ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ಹಾಲಾಹಲ ವಿಷವನ್ನು ಶಿವನು ಕುಡಿದಾಗ ಈ ದತ್ತೂರಿ ಗಿಡ ಉದ್ಭವಿಸಿತು ಎಂಬ ನಂಬಿಕೆಯಿದೆ. ಹೀಗಾಗಿ, ದತ್ತೂರಿ ಹೂವು ಮತ್ತು ಅದರ ಕಾಯಿಯನ್ನು ಶಿವನಿಗೆ ಅತ್ಯಂತ ಪ್ರಿಯವಾದ ಅರ್ಪಣೆ ಎಂದು ಪರಿಗಣಿಸಲಾಗುತ್ತದೆ. ಕಠಿಣ ಪರಿಸ್ಥಿತಿಯಲ್ಲೂ ಬೆಳೆಯುವ ಈ ಸಸ್ಯವು ಅಧ್ಯಾತ್ಮದಲ್ಲಿ ವೈರಾಗ್ಯದ ಸಂಕೇತವಾಗಿದೆ.
ವಿಷ ಮತ್ತು ಔಷಧದ ನಡುವಿನ ತೆಳು ಗೆರೆ
ವೈದ್ಯಕೀಯ ಲೋಕದಲ್ಲಿ ಈ ಗಿಡದ ಸಾರವನ್ನು ಅಲ್ಪ ಪ್ರಮಾಣದಲ್ಲಿ ವಾಕರಿಕೆ ಮತ್ತು ಪ್ರಯಾಣದ ವೇಳೆ ಉಂಟಾಗುವ ಅಸ್ವಸ್ಥತೆ ನಿವಾರಿಸಲು ಬಳಸಲಾಗುತ್ತದೆ. ಆದರೆ ಇದರ ಹೆಚ್ಚಿನ ಡೋಸ್ ಮಾರಣಾಂತಿಕವಾಗಬಲ್ಲದು. ಎಪ್ಸ್ಟೀನ್ ಫೈಲ್ಸ್‌ನಲ್ಲಿ ಈ ಸಸ್ಯದ ಪ್ರಸ್ತಾಪವಾಗಿರುವುದು, ಆತ ಲೈಂಗಿಕ ದೌರ್ಜನ್ಯದ ಅಸ್ತ್ರವಾಗಿ ಇದನ್ನು ಬಳಸಿಕೊಂಡಿರಬಹುದು ಎಂಬ ಭೀತಿಯನ್ನು ಹುಟ್ಟುಹಾಕಿದೆ. ಒಟ್ಟಿನಲ್ಲಿ, ದೇವರಿಗೆ ಅರ್ಪಿಸುವ ಹೂವು ಒಬ್ಬ ಅಪರಾಧಿಯ ಕೈಯಲ್ಲಿ ದುರ್ಬಳಕೆಯಾಗಿದ್ದು ಮಾತ್ರ ವಿಪರ್ಯಾಸ.
ಇದನ್ನೂ ಓದಿ : ದಾವಣಗೆರೆ | ಗ್ಯಾರೇಜ್‌ನಲ್ಲಿ ಆಕಸ್ಮಿಕ ಬೆಂಕಿ.. 4 ಕಾರು, 1 ಕ್ರಷರ್ ಸುಟ್ಟು ಕರಕಲು



















