ಹಂಪಿ | ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಸರ್ಕಾರಿ ಶಾಲಾ ಮಕ್ಕಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿದೆ. ಹೌದು.. ದೂರದಿಂದ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಪುಟಾಣಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಆಕಾಶದಲ್ಲಿ ಹಾರಾಡುವ ಅವಕಾಶ ಮಾಡಿಕೊಡುವ ಮೂಲಕ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.
ಸರ್ಕಾರಿ ಶಾಲೆಯ ಸುಮಾರು 60 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ಏರಿ ಹಂಪಿಯ ಸೌಂದರ್ಯವನ್ನು ಆಕಾಶದಿಂದ ಸವಿಯುವ ಅವಕಾಶವನ್ನು ಸಚಿವರು ಮಾಡಿಕೊಟ್ಟಿದ್ದಾರೆ.
ಹಂಪಿ ಉತ್ಸವದ ಅಂಗವಾಗಿ ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ನೋಡಲು ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳು ಶನಿವಾರ ಕುತೂಹಲದಿಂದ ಜಮಾಯಿಸಿದ್ದರು. ಅಲ್ಲಿಗೆ ಬಂದ ಸಚಿವರು ಮಕ್ಕಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, “ನೀವೂ ಆಕಾಶದಲ್ಲಿ ಹಾರಾಡಬೇಕಾ?” ಎಂದು ಕೇಳಿದರು. ಇದಕ್ಕೆ ಮಕ್ಕಳಿಂದ ಬಂದ ಉತ್ತರ “ಹೌದು ಸರ್” ಎನ್ನುವ ಹರ್ಷೋದ್ಗಾರ ಕೇಳಿಬಂತು.
ಮಕ್ಕಳ ಆಸೆಯನ್ನು ಈಡೇರಿಸಲು ಮುಂದಾದ ಸಚಿವರು, ತಮ್ಮ ಸ್ವಂತ ಹಣದಿಂದಲೇ ಹೆಲಿ ರೈಡ್ ವ್ಯವಸ್ಥೆ ಮಾಡಿದರು. ಇದು ಶಾಲಾ ಮಕ್ಕಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿದೆ. ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿತ್ತು. ಈ ವೇಳೆ ಮಾತನಾಡಿದ ಸಚಿವರು, ಮಕ್ಕಳ ಮುಖದಲ್ಲಿನ ಆ ಖುಷಿ ನೋಡಿದಾಗ ಸಿಗುವ ತೃಪ್ತಿ ಬೇರೆ ಯಾವುದರಲ್ಲೂ ಇಲ್ಲ. ಅವರ ಕನಸಿಗೆ ರೆಕ್ಕೆ ನೀಡುವ ಸಣ್ಣ ಪ್ರಯತ್ನವಿದು ಎಂದು ತಿಳಿಸಿದರು.
ಇದನ್ನೂ ಓದಿ : ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು



















