ಬೆಂಗಳೂರು: ಬನ್ನೇರುಘಟ್ಟ ರಸ್ತೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಶೆಯಲ್ಲಿದ್ದ ಉತ್ತರ ಭಾರತೀಯ ಯುವತಿಯರು ಸಾರ್ವಜನಿಕರಿಗೆ ಕಿರಿಕ್ ನೀಡಿದ ಘಟನೆ ನಡೆದಿದೆ. ನಶೆಯಲ್ಲಿದ್ದ ಯುವತಿಯರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಕ್ಯಾಬ್ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದಾದ ಬಳಿಕ ಕ್ಯಾಬ್ ಚಾಲಕರೊಂದಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜಗಳಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಯುವತಿಯರು, ಘಟನೆಗೆ ಪ್ರಶ್ನೆ ಮಾಡಿದ ಸಾರ್ವಜನಿಕರ ಮೇಲೂ ಅಸಭ್ಯವಾಗಿ ವರ್ತಿಸಿದ್ದಾರೆ. ಡಿಎಲ್‌ಎಫ್ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ, ಹುಳಿಮಾವು ಠಾಣೆಗೆ ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮದ್ಯ ಸೇವನೆಯ ಪರಿಣಾಮ ಅಸಹನೀಯ ರೀತಿಯಲ್ಲಿ ವರ್ತಿಸಿದ ಯುವತಿಯರು, ಮದ್ಯದ ಬಾಟಲ್ ತೋರಿಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಸಾರ್ವಜನಿಕರು ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಸಮ್ಮುಖದಲ್ಲಿಯೂ ಯುವತಿಯರು ಅಸಭ್ಯ ವರ್ತನೆ ಮುಂದುವರಿಸಿದ್ದು, ಪ್ರಕರಣ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಹಾಸನ | ಕೆರೆಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು!



















