ಢಾಕಾ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮತ್ತೆ ವಿವಾದದ ಸುಳಿಗೆ ಸಿಲುಕಿದೆ. ಸ್ಟಾರ್ ಕ್ರಿಕೆಟಿಗ ತಮೀಮ್ ಇಕ್ಬಾಲ್ ಅವರನ್ನು ‘ಭಾರತದ ಏಜೆಂಟ್’ ಎಂದು ಕರೆದು ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಮಂಡಳಿಯ ನಿರ್ದೇಶಕ ಎಂ. ನಜ್ಮುಲ್ ಇಸ್ಲಾಂ ಅವರನ್ನು ಪದಚ್ಯುತಗೊಳಿಸಿದ ಕೆಲವೇ ದಿನಗಳಲ್ಲಿ ಮತ್ತೆ ಹಣಕಾಸು ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಕ್ರಿಕೆಟ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಆಟಗಾರರ ತೀವ್ರ ಪ್ರತಿರೋಧ ಮತ್ತು ಪ್ರತಿಭಟನೆಯ ನಡುವೆಯೂ ಮಂಡಳಿಯು ಈ ನಿರ್ಧಾರ ಕೈಗೊಂಡಿರುವುದು ಬಾಂಗ್ಲಾ ಕ್ರಿಕೆಟ್‌ನಲ್ಲಿ ಆಡಳಿತ ಮತ್ತು ಆಟಗಾರರ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕೆಲವು ದಿನಗಳ ಹಿಂದೆ ತಮೀಮ್ ಇಕ್ಬಾಲ್ ಅವರು ಟಿ20 ವಿಶ್ವಕಪ್ ಕುರಿತು ನೀಡಿದ್ದ ಹೇಳಿಕೆಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದ ನಜ್ಮುಲ್ ಇಸ್ಲಾಂ, ತಮೀಮ್ ಅವರನ್ನು ದೇಶದ್ರೋಹಿ ಎಂಬರ್ಥದಲ್ಲಿ ಟೀಕಿಸಿದ್ದರು. ಅಷ್ಟೇ ಅಲ್ಲದೆ, ವಿಶ್ವಕಪ್ ಬಹಿಷ್ಕಾರದ ಹಿನ್ನೆಲೆಯಲ್ಲಿ ಆಟಗಾರರಿಗೆ ಸಂಭಾವನೆ ನೀಡಬಾರದು ಮತ್ತು ಆಟಗಾರರು ಸರಿಯಾಗಿ ಪ್ರದರ್ಶನ ನೀಡದಿದ್ದಾಗ ಮಂಡಳಿಯು ಅವರ ಹಣವನ್ನು ವಾಪಸ್ ಪಡೆಯುವ ಹಕ್ಕು ಹೊಂದಿರಬೇಕು ಎಂಬ ವಿಲಕ್ಷಣ ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆಗಳಿಂದ ಕೆರಳಿದ ಬಾಂಗ್ಲಾ ಆಟಗಾರರ ಸಂಘ (CWAB), ನಜ್ಮುಲ್ ರಾಜೀನಾಮೆಗೆ ಆಗ್ರಹಿಸಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ಪಂದ್ಯಗಳನ್ನು ಬಹಿಷ್ಕರಿಸಿತ್ತು. ಪರಿಣಾಮವಾಗಿ ಲೀಗ್ ಅನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವ ಅನಿವಾರ್ಯತೆ ಮಂಡಳಿಗೆ ಎದುರಾಗಿತ್ತು.
ವಿವರಣೆ ತೃಪ್ತಿ ತಂದಿದೆ
ಆಟಗಾರರ ಒತ್ತಡಕ್ಕೆ ಮಣಿದು ಜನವರಿ 15 ರಂದು ನಜ್ಮುಲ್ ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿತ್ತು ಮತ್ತು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಶನಿವಾರ ನಡೆದ ಬಿಸಿಸಿಐ ನಿರ್ದೇಶಕರ ಸಭೆಯ ನಂತರ ಮಾಧ್ಯಮ ಸಮಿತಿ ಅಧ್ಯಕ್ಷ ಅಮ್ಜದ್ ಹೊಸೈನ್, ನಜ್ಮುಲ್ ನೀಡಿದ ವಿವರಣೆಯು ಶಿಸ್ತು ಸಮಿತಿಗೆ ತೃಪ್ತಿ ತಂದಿದೆ ಎಂಬ ಕಾರಣ ನೀಡಿ ಅವರನ್ನು ಮತ್ತೆ ಹಳೆಯ ಹುದ್ದೆಗೆ ಮರುನೇಮಕಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಸರ್ಕಾರದ ಆದೇಶದಂತೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸಿರುವ ಬಾಂಗ್ಲಾದೇಶದ ಈ ನಿರ್ಧಾರದಿಂದಾಗಿ ಈಗಾಗಲೇ ಸ್ಕಾಟ್ಲೆಂಡ್ ತಂಡಕ್ಕೆ ವಿಶ್ವಕಪ್‌ನಲ್ಲಿ ಸ್ಥಾನ ನೀಡಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಟಗಾರರ ವಿರೋಧವಿದ್ದರೂ ವಿವಾದಿತ ವ್ಯಕ್ತಿಯನ್ನು ಮರಳಿ ಕರೆತಂದಿರುವುದು ಬಾಂಗ್ಲಾ ಕ್ರಿಕೆಟ್‌ನ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ.
ಇದನ್ನೂ ಓದಿ : ನೆಲಮಂಗಲದಲ್ಲಿ ರೌಡಿಶೀಟರ್ ಆಟೋ ನಾಗನ ಬರ್ಬರ ಹತ್ಯೆ!


















