ಲಾಹೋರ್ : ಕಳೆದ ಕೆಲವು ದಿನಗಳಿಂದ ಸೃಷ್ಟಿಯಾಗಿದ್ದ ಭಾರೀ ನಾಟಕೀಯ ಬೆಳವಣಿಗೆಗಳ ನಂತರ, ಅಂತೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) 2026ರ ಟಿ20 ವಿಶ್ವಕಪ್‌ಗಾಗಿ ತನ್ನ 15 ಸದಸ್ಯರ ಬಲಿಷ್ಠ ತಂಡವನ್ನು ಘೋಷಿಸಿದೆ. ಭದ್ರತಾ ಕಾರಣ ನೀಡಿ ಭಾರತಕ್ಕೆ ಬರಲು ನಿರಾಕರಿಸಿದ್ದ ಬಾಂಗ್ಲಾದೇಶವನ್ನು ವಿಶ್ವಕಪ್‌ನಿಂದ ಹೊರಹಾಕಿದ ಐಸಿಸಿ ನಿರ್ಧಾರವನ್ನು ವಿರೋಧಿಸಿ, ಪಾಕಿಸ್ತಾನ ಕೂಡ ಟೂರ್ನಿಯಿಂದ ಹಿಂದೆ ಸರಿಯುವ ಬೆದರಿಕೆ ಹಾಕಿತ್ತು. ಆದರೆ, ಐಸಿಸಿಯ ಕಠಿಣ ಎಚ್ಚರಿಕೆ ಹಾಗೂ ನಿಷೇಧದ ಭೀತಿಯ ಬೆನ್ನಲ್ಲೇ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ಪಟ್ಟು ಸಡಿಲಿಸಿದ್ದು, ಅಂತಿಮವಾಗಿ ತಂಡವನ್ನು ಪ್ರಕಟಿಸುವ ಮೂಲಕ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.
ಈ ಬಾರಿಯ ವಿಶ್ವಕಪ್ ತಂಡದಲ್ಲಿ ಪಾಕಿಸ್ತಾನ ಕೆಲವು ಅಚ್ಚರಿಯ ಬದಲಾವಣೆಗಳನ್ನು ಮಾಡಿದೆ. ಅನುಭವಿ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ವೇಗಿ ಹ್ಯಾರಿಸ್ ರೌಫ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ರಿಜ್ವಾನ್ ಕಳೆದ ಒಂದು ವರ್ಷದಿಂದ ಟಿ20 ಮಾದರಿಯಿಂದ ದೂರ ಉಳಿದಿದ್ದರೆ, ಹ್ಯಾರಿಸ್ ರೌಫ್ ಏಷ್ಯಾಕಪ್ ಫೈನಲ್‌ನಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇತ್ತೀಚಿನ ಬಿಗ್ ಬ್ಯಾಷ್ ಲೀಗ್‌ನಲ್ಲಿ ರನ್ ಗಳಿಸಲು ಪರದಾಡಿದ್ದರೂ, ಹಿರಿಯ ಆಟಗಾರ ಬಾಬರ್ ಅಜಮ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಂಡವನ್ನು ಸಲ್ಮಾನ್ ಅಲಿ ಆಗಾ ಮುನ್ನಡೆಸಲಿದ್ದಾರೆ.
ಲಾಹೋರ್‌ನಲ್ಲಿ ಸಿದ್ಧತೆ
ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತಂಡವು ಜನವರಿ 29ರಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಇದಕ್ಕಾಗಿ ಈಗಾಗಲೇ ಲಾಹೋರ್‌ನಲ್ಲಿ ಸಿದ್ಧತೆ ಆರಂಭಿಸಿದೆ. ವಿಶ್ವಕಪ್‌ನಲ್ಲಿ ‘ಎ’ ಗುಂಪಿನಲ್ಲಿರುವ ಪಾಕಿಸ್ತಾನ, ಭಾರತ, ನೆದರ್ಲ್ಯಾಂಡ್ಸ್, ಯುಎಸ್ಎ ಮತ್ತು ನಮೀಬಿಯಾ ತಂಡಗಳೊಂದಿಗೆ ಸೆಣಸಲಿದೆ. ಫೆಬ್ರವರಿ 7ರಂದು ಕೊಲಂಬೊದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡುವ ಮೂಲಕ ಪಾಕಿಸ್ತಾನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಬಾಂಗ್ಲಾದೇಶದ ಬಹಿಷ್ಕಾರದ ಬೆನ್ನಲ್ಲೇ ಪಾಕಿಸ್ತಾನ ಕೂಡ ಸರ್ಕಾರದ ಅನುಮತಿಯ ನೆಪವೊಡ್ಡಿ ಹೈಡ್ರಾಮಾ ನಡೆಸಿತ್ತು. ಆದರೆ ಭಾರತದಲ್ಲಿ ಆಡಲು ಯಾವುದೇ ಭದ್ರತಾ ಭೀತಿ ಇಲ್ಲ ಎಂಬ ಐಸಿಸಿಯ ಸ್ವತಂತ್ರ ತನಿಖಾ ವರದಿಯು ಪಾಕಿಸ್ತಾನದ ವಾದವನ್ನು ದುರ್ಬಲಗೊಳಿಸಿತ್ತು. ಅಂತಿಮವಾಗಿ ಕ್ರಿಕೆಟ್ ಹಿತದೃಷ್ಟಿಯಿಂದ ಪಾಕಿಸ್ತಾನ ತನ್ನ ನಿಲುವನ್ನು ಬದಲಿಸಿಕೊಂಡಿರುವುದು ಟೂರ್ನಿಯ ಕುತೂಹಲವನ್ನು ಹೆಚ್ಚಿಸಿದೆ.
ಇದನ್ನೂ ಓದಿ : BCCI ಮಹತ್ವದ ನಿರ್ಧಾರ | ಮಾಸಿಕ ವೇತನ ಪಟ್ಟಿಯಿಂದ ‘ಎ ಪ್ಲಸ್’ ದರ್ಜೆ ರದ್ದು.. ಸ್ಟಾರ್ ಆಟಗಾರರಿಗೆ ಸಂಭಾವನೆ ಕಡಿತದ ಭೀತಿ


















