ಚೆನ್ನೈ : ಐಪಿಎಲ್ 2026ರ ಹರಾಜಿನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಟೂರ್ನಿ ಆರಂಭಕ್ಕೂ ಮುನ್ನವೇ ಭಾರಿ ಹೊಡೆತ ಬಿದ್ದಿದೆ. ಬರೋಬ್ಬರಿ 14.20 ಕೋಟಿ ರೂಪಾಯಿಗಳ ಬೃಹತ್ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದ ಯುವ ಆಲ್‌ರೌಂಡರ್ ಪ್ರಶಾಂತ್ ವೀರ್ ಭುಜದ ಗಾಯಕ್ಕೆ ತುತ್ತಾಗಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಅವರು ಆಡುವುದು ಅನುಮಾನ ಎನ್ನಲಾಗುತ್ತಿದೆ.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವರ್ಗಾವಣೆಯಾದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಟಗಾರ ಎಂದು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವೀರ್ ಮೇಲೆ ಕೋಟಿ ಕೋಟಿ ಹಣ ಸುರಿದಿತ್ತು. ಆದರೆ ಇದೀಗ ಋತು ಆರಂಭಕ್ಕೂ ಮುನ್ನವೇ ಈ ಯುವ ಪ್ರತಿಭೆ ಗಾಯದ ಸಮಸ್ಯೆಗೆ ಸಿಲುಕಿರುವುದು ತಂಡದ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ.
ಬದಲಿ ಆಟಗಾರನ ಬಳಕೆ
ಜಾರ್ಖಂಡ್ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದ ಪ್ರಶಾಂತ್ ವೀರ್, ಫೀಲ್ಡಿಂಗ್ ಮಾಡುವಾಗ ಭೀಕರವಾಗಿ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಗಾಯದ ತೀವ್ರತೆ ಎಷ್ಟಿತ್ತೆಂದರೆ, ಬಿಸಿಸಿಐನ ಹೊಸ ನಿಯಮದ ಪ್ರಕಾರ ಪಂದ್ಯದ ಮಧ್ಯದಲ್ಲೇ ಅವರಿಗೆ ಬದಲಿಯಾಗಿ ಶಿವಂ ಶರ್ಮಾ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳಲಾಯಿತು. ವೈದ್ಯಕೀಯ ವರದಿಗಳ ಪ್ರಕಾರ ಅವರು ಕನಿಷ್ಠ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ. ಆದರೆ ಐಪಿಎಲ್‌ನಂತಹ ಸುದೀರ್ಘ ಟೂರ್ನಿಯಲ್ಲಿ ಪೂರ್ಣ ಫಿಟ್‌ನೆಸ್ ಇಲ್ಲದೆ ಆಡುವುದು ಕಷ್ಟಕರವಾಗಿರುವುದರಿಂದ, ಅವರು ಸರಣಿಯಿಂದಲೇ ಹೊರಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರತಿಭೆಯಾಗಿ ಮೂಡಿಬಂದಿದ್ದ ಪ್ರಶಾಂತ್ ವೀರ್, ಯುಪಿ ಟಿ20 ಲೀಗ್‌ನಲ್ಲಿ ನೋಯ್ಡಾ ಸೂಪರ್ ಕಿಂಗ್ಸ್ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದರು. 2025ರ ಋತುವಿನಲ್ಲಿ 155ರ ಸ್ಟ್ರೈಕ್ ರೇಟ್‌ನಲ್ಲಿ 320 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದ ಈ ಯುವಕ, ಅಂಡರ್-23 ಹಂತದಲ್ಲೂ ಏಳು ಪಂದ್ಯಗಳಿಂದ 18 ವಿಕೆಟ್ ಕಬಳಿಸಿ ಭರವಸೆ ಮೂಡಿಸಿದ್ದರು. ಅನ್‌ಕ್ಯಾಪ್ಡ್ ಆಟಗಾರನೊಬ್ಬ ಐಪಿಎಲ್ ಹರಾಜಿನಲ್ಲಿ ಇಷ್ಟೊಂದು ದೊಡ್ಡ ಮೊತ್ತ ಪಡೆದಿದ್ದೇ ಒಂದು ದಾಖಲೆಯಾಗಿತ್ತು. ಕಾರ್ತಿಕ್ ಶರ್ಮಾ ಅವರೊಂದಿಗೆ ಜಂಟಿಯಾಗಿ ಅತಿ ಹೆಚ್ಚು ಸಂಭಾವನೆ ಪಡೆದ ಅನ್‌ಕ್ಯಾಪ್ಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೀರ್ ಮೇಲೆ ಚೆನ್ನೈ ತಂಡ ಅಪಾರ ಭರವಸೆ ಇಟ್ಟುಕೊಂಡಿತ್ತು.
ಪ್ರಶಾಂತ್ ವೀರ್ ಅಲಭ್ಯರಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಲಿದೆ. ಜಡೇಜಾ ಅವರ ನಿರ್ಗಮನದ ನಂತರ ತೆರವಾಗಿದ್ದ ಆಲ್‌ರೌಂಡರ್ ಸ್ಥಾನಕ್ಕೆ ವೀರ್ ಅವರನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಯೋಜಿಸಿತ್ತು. ಇದೀಗ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಪ್ರಶಾಂತ್ ಅವರ ಚೇತರಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಗಾಯ ಗಂಭೀರವಾಗಿದ್ದರೆ ಅವರಿಗೆ ಬದಲಿಯಾಗಿ ಯಾವ ಆಟಗಾರನನ್ನು ಆಯ್ಕೆ ಮಾಡಬೇಕು ಎಂಬ ಆಲೋಚನೆಯಲ್ಲಿದೆ. ಒಂದು ವೇಳೆ ವೀರ್ ಐಪಿಎಲ್‌ನಿಂದ ಹೊರಗುಳಿದರೆ, ಇದು ಕೇವಲ ಚೆನ್ನೈ ತಂಡಕ್ಕೆ ಮಾತ್ರವಲ್ಲದೆ, ತಮ್ಮ ಕೆರಿಯರ್‌ನ ಸುವರ್ಣ ಅವಕಾಶದ ಹೊಸ್ತಿಲಲ್ಲಿದ್ದ ಯುವ ಆಟಗಾರನಿಗೂ ವೈಯಕ್ತಿಕವಾಗಿ ದೊಡ್ಡ ಹಿನ್ನಡೆಯಾಗಲಿದೆ.
ಇದನ್ನೂ ಓದಿ : ಚಿತ್ರರಂಗದ ‘ಹೀ-ಮ್ಯಾನ್’ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ.. ರೋಹಿತ್ ಶರ್ಮಾಗೆ ಪದ್ಮಶ್ರೀ ಗೌರವ!


















