ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಾಮಾನ್ಯ. ಕನಿಷ್ಠ 30 ವರ್ಷ ವಯಸ್ಸು ತಲುಪುವ ಮೊದಲೇ ಹೆಚ್ಚಿನವರ ಕೂದಲು ಬಿಳಿ ಬಣ್ಣಕ್ಕೆ ತಿರುಗಿರುತ್ತದೆ. ಹದಿಹರೆಯದ ಮಕ್ಕಳಲ್ಲೂ ಕೂದಲುಗಳು ಬೆಳ್ಳಗಾಗುತ್ತಿವೆ. ಇದು ಏಕೆ ಸಂಭವಿಸುತ್ತದೆ? ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಿಗೆ ಕಾರಣಗಳೇನು? ಮತ್ತೆ ಕಪ್ಪು ಕೂದಲು ಬರಲು ಏನು ಮಾಡಬೇಕು? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ.

ನಾವು ತಿನ್ನುವ ಆಹಾರ ಮತ್ತು ಮಾಲಿನ್ಯದಂತಹ ಅನೇಕ ಅಂಶಗಳು ಕೂದಲಿನ ಮೇಲೆ ಪರಿಣಾಮ ಬೀರುತ್ತವೆ. ಪೌಷ್ಟಿಕಾಂಶದ ಕೊರತೆ, ಅದರಲ್ಲೂ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಪ್ರೋಟಿನ್ ಕೊರತೆಯಿಂದ ಕೂದಲು ಬೆಳ್ಳಗಾಗಲು ಕಾರಣವಾಗಿದೆ.
ಸೇವಿಸಬೇಕಾದ ಆಹಾರಗಳೇನು?
ಮೊಟ್ಟೆ: ಮೊಟ್ಟೆಯಲ್ಲಿ ವಿಟಮಿನ್ ಬಿ 12, ಬಯೋಟಿನ್ ಮತ್ತು ಉತ್ತಮ ಗುಣಮಟ್ಟದ ಪ್ರೋಟೀನ್ ಇದೆ. ಬಿ 12 ಹಾಗೂ ಪೌಷ್ಟಿಕಾಂಶ ಕೊರತೆಯಿಂದ ಕೂದಲು ಬಿಳಿಯಾಗುತ್ತದೆ. ಹಾಗಾಗಿ ಬೇಯಿಸಿದ ಮೊಟ್ಟೆಯನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ.

ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಕೂದಲಿನ ವರ್ಣದ್ರವ್ಯ ಕೋಶಗಳನ್ನು ರಕ್ಷಿಸುತ್ತದೆ. ಮೆಲನಿನ್ ಉತ್ಪಾದನೆಗೂ ನೆಲ್ಲಿಕಾಯಿ ಸೇವನೆ ಅಗತ್ಯವಾಗಿದ್ದು ವಾರಕ್ಕೆ ಒಮ್ಮೆಯಾದರೂ ಇದನ್ನು ಸೇವಿಸಿ.

ದಾಳಿಂಬೆ: ಇದರಲ್ಲಿ ವಿಟಮಿನ್ ಬಿ6 ಮತ್ತು ಫೋಲೇಟ್ ಇದ್ದು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೂದಲಿನ ಆರೋಗ್ಯಕ್ಕೂ ಇದರ ಸೇವನೆ ಉತ್ತಮವಾಗಿದ್ದು, ಕೂದಲು ಬೆಳ್ಳಗಾಗುವುದನ್ನು ನಿಧಾನಗೊಳಿಸುತ್ತದೆ.

ಬೀಜಗಳು: ಕಪ್ಪು ಎಳ್ಳು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದ್ದು ವೈಜ್ಞಾನಿಕವಾಗಿ ತಾಮ್ರ ಮತ್ತು ಕಬ್ಬಿಣದ ಮೂಲವೆಂದು ಗುರುತಿಸಲ್ಪಟ್ಟಿದೆ. ಅದೇ ರೀತಿ ಮೆಲನಿನ್ ಉತ್ಪಾದನೆಗೆ ಅವಶ್ಯಕವಾಗಿದೆ. ಕುಂಬಳ ಕಾಯಿ ಬೀಜ ಮತ್ತು ಸೂರ್ಯಕಾಂತಿ ಬೀಜಗಳ ಸೇವನೆ ಕೂಡ ಕೂದಲಿಗೆ ನೈಸರ್ಗಿಕ ಬಣ್ಣ ನೀಡಲು ಅತ್ಯಗತ್ಯ.

ಪಾಲಕ್ ಸೊಪ್ಪು: ಇದರಲ್ಲಿ ಕಬ್ಬಿಣದ ಅಂಶವು ಹೇರಳವಾಗಿದ್ದು ಕೂದಲಿನ ಬುಡಕ್ಕೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕಬ್ಬಿಣದ ಕೊರತೆ ಇರುವವರಲ್ಲಿ ಕೂದಲು ಬೇಗನೆ ಬೆಳೆಯಲು ಇದು ಸಹಾಯ ಮಾಡುತ್ತದೆ.

ಆಕ್ರೋಟ್: ಇದರಲ್ಲಿ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳಿದ್ದು, ಕೂದಲಿನ ಕೋಶಗಳು ಹಾನಿಯಾಗದಂತೆ ರಕ್ಷಿಸುತ್ತವೆ.

ಹಾಲು ಮತ್ತು ಮೊಸರು: ಹಾಲು ಮತ್ತು ಮೊಸರು ಇವು ಬಿ12 ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲಗಳು. ಕೂದಲಿನ ಆರೋಗ್ಯಕ್ಕೆ ಇವು ಉತ್ತಮ. ಸಂಸ್ಕರಿಸಿದ ಡೈರಿ ಉತ್ಪನ್ನಗಳಿಗಿಂತ ತಾಜಾ ಹಾಲು ಮತ್ತು ಮನೆಯಲ್ಲಿ ಮಾಡಿದ ಮೊಸರು ಸೇವನೆ ಮಾಡುವುದು ಉತ್ತಮ.

ಇಷ್ಟೇ ಅಲ್ಲದೇ ದೈನಂದಿನ ಜೀವನದಲ್ಲಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೂ ಹೊಗೆ ಮತ್ತು ಮಾಲಿನ್ಯದಿಂದ ದೂರವಿರಬೇಕು ಎಂದು ತಜ್ಞರು ಹೇಳುತ್ತಾರೆ. ವಾರಕ್ಕೆ ಎರಡು ಬಾರಿಯಾದರೂ ತಲೆ ಸ್ನಾನ ಮಾಡಬೇಕು. ಆಗಾಗ ಕೂದಲಿಗೆ ಎಣ್ಣೆ ಹಚ್ಚುವುದು ಹಾಗೂ ತಲೆಗೆ ಮಸಾಜ್ ಮಾಡುವುದು ಒಳ್ಳೆಯದು. ನೈಸರ್ಗಿಕ ಪದಾರ್ಥಗಳಾದ ಆಮ್ಲಾ ಪೌಡರ್, ದಾಸವಾಳದ ಎಣ್ಣೆ, ಕರಿಬೇವು, ಬೇವಿನ ಎಣ್ಣೆ, ಲಿಂಬೆರಸ ಕೂದಲಿಗೆ ತುಂಬಾ ಪ್ರಯೋಜನಕಾರಿ. ಕೂದಲು ಆರೋಗ್ಯವಾಗಿರುವುದರ ಜೊತೆಗೆ ಬಿಳಿಯಾಗುವುದೂ ಕೂಡ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಚಿಕ್ಕವಯಸ್ಸಿನಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ಆರಂಭದಿಂದಲೇ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. 20 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕೂದಲು ಬೆಳ್ಳಗಾಗುತ್ತಿದ್ದರೆ ನೇರವಾಗಿ ಡೈ ಬಳಸದೆ ವೈದ್ಯರನ್ನು ಸಂಪರ್ಕಿಸಬೇಕು. ನಿಜವಾದ ಕಾರಣವನ್ನು ತಿಳಿದುಕೊಳ್ಳಲು ಹಾಗೂ ಸೂಕ್ತ ಪರಿಹಾರಗಳನ್ನು ಪ್ರಯತ್ನಿಸಲು ಸೂಚಿಸಲಾಗುತ್ತದೆ. ರಾಸಾಯನಿಕಗಳನ್ನು ಒಳಗೊಂಡಿರುವ ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂಗಳನ್ನು ವಾರಕ್ಕೆ ಎರಡು ಬಾರಿ ಹೆಚ್ಚು ಬಳಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವಿಕೆ ಸಮಸ್ಯೆಯೇ? ಇಲ್ಲಿದೆ ಮನೆಮದ್ದು



















