ಮುಂಬೈ: ಆನ್‌ಲೈನ್ ಆ್ಯಪ್ ಮೂಲಕ ಬುಕ್ ಮಾಡಿದ್ದ ಮಸಾಜ್ ಸೇವೆಯನ್ನು ರದ್ದುಗೊಳಿಸಿದ ಕಾರಣಕ್ಕೆ, ಮಸಾಜ್ ಥೆರಪಿಸ್ಟ್ ಒಬ್ಬರು ಮಹಿಳಾ ಗ್ರಾಹಕಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಮುಂಬೈನ ವಡಾಲದಲ್ಲಿ ನಡೆದಿದೆ. ನಡುರಸ್ತೆಯ ಗುದ್ದಾಟದಂತೆ ಮನೆಯೊಳಗೇ ನಡೆದ ಈ ಜುಟ್ಟುಜಗಳದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
ವಡಾಲ ನಿವಾಸಿಯಾಗಿರುವ 46 ವರ್ಷದ ಶಹನಾಜ್ ಸೈಯದ್ ಎಂಬುವವರು ಭುಜದ ನೋವಿನ (frozen shoulder) ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಪ್ರಸಿದ್ಧ ಆ್ಯಪ್ ಒಂದರ ಮೂಲಕ ಮಸಾಜ್ ಸೇವೆಗೆ ಬುಕ್ ಮಾಡಿದ್ದರು. ನಿಗದಿತ ಸಮಯಕ್ಕೆ ಅಶ್ವಿನಿ ವರ್ತಪಿ ಎಂಬ ಮಹಿಳಾ ಥೆರಪಿಸ್ಟ್ ಶಹನಾಜ್ ಅವರ ನಿವಾಸಕ್ಕೆ ಬಂದಿದ್ದಾರೆ.
ಆದರೆ, ಥೆರಪಿಸ್ಟ್ ತಂದಿದ್ದ ಮಸಾಜ್ ಬೆಡ್‌ನ ಗಾತ್ರ ಮತ್ತು ಅವರ ವರ್ತನೆ ಕಂಡು ಶಹನಾಜ್ ಅವರಿಗೆ ಅಸಮಾಧಾನವಾಗಿದೆ. ಹೀಗಾಗಿ ಸೇವೆಯನ್ನು ರದ್ದುಗೊಳಿಸಿ, ಹಣ ವಾಪಸ್ (ರೀಫಂಡ್) ಪ್ರಕ್ರಿಯೆ ಆರಂಭಿಸಲು ಮುಂದಾಗಿದ್ದಾರೆ.
ಮನೆಯಲ್ಲೇ ನಡೆಯಿತು ಮಾರಾಮಾರಿ:
ಬುಕ್ಕಿಂಗ್ ರದ್ದುಗೊಳಿಸುತ್ತಿದ್ದಂತೆಯೇ ಕೋಪಗೊಂಡ ಥೆರಪಿಸ್ಟ್ ಅಶ್ವಿನಿ, ಏಕಾಏಕಿ ರೇಗಾಡಲು ಶುರುಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಶಹನಾಜ್ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಶಹನಾಜ್ ಅವರ ಕೂದಲನ್ನು ಎಳೆದಾಡಿ, ಮುಖಕ್ಕೆ ಗುದಿಸಿ, ಕೆಳಗೆ ದೂಡಿ ದೌರ್ಜನ್ಯ ಎಸಗಿದ್ದಾರೆ. ತಾಯಿಯನ್ನು ರಕ್ಷಿಸಲು ಬಂದ ಮಗನ ಮೇಲೂ ಆರೋಪಿ ದೂಡಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ದೂರು ದಾಖಲು:
ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲೇ ಶಹನಾಜ್ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲೇ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸದ್ಯ ವಡಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎನ್‌ಸಿ (Non-cognizable offence) ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬುಕ್ಕಿಂಗ್ ಆ್ಯಪ್‌ನಲ್ಲಿ ಥೆರಪಿಸ್ಟ್ ವಿವರಗಳಲ್ಲಿ ತಾಂತ್ರಿಕ ದೋಷವಿತ್ತೆಂದು ತನಿಖೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ : ಹೋಂವರ್ಕ್ ಮಾಡಿಲ್ಲವೆಂದು 4 ವರ್ಷದ ಮಗಳನ್ನೇ ಹೊಡೆದು ಕೊಂದ ತಂದೆ |ಫರಿದಾಬಾದ್‌ನಲ್ಲಿ ಅಮಾನವೀಯ ಘಟನೆ



















