ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ಭೀಕರ ಕೊಲೆ ನಡೆದಿದೆ. ಅಶೋಕ್ (35) ಎಂಬ ಯುವಕನನ್ನು ಕೇರೆಯಲ್ಲಿ ಕೊಲೆ ಮಾಡಿ, ಬಳಿಕ ರಸ್ತೆ ಬದಿಗೆ ಮೃತದೇಹ ತಂದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸ್ನೇಹಿತನಿಗೆ ಮುಹೂರ್ತ ಇಟ್ಟು ಎಣ್ಣೆ ಪಾರ್ಟಿ ಮಾಡಿದ್ದ ಹಂತಕರು, ಬಳಿಕ ಅಶೋಕ್‌ನನ್ನು ಕರೆದೊಯ್ದು ಕೇರೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ರಕ್ತದ ಮೇಲೆ ಮಣ್ಣು ಹಾಕಿ, ಕಲ್ಲುಗಳನ್ನು ಇಡಲಾಗಿತ್ತು ಎಂದು ತಿಳಿದುಬಂದಿದೆ.
ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಹಂತಕರು ತಯಾರಿ ಮಾಡಿಕೊಂಡಿದ್ದಾರೆಯೆಂಬ ಅನುಮಾನವೂ ಇದೆ. ಅಲ್ಲದೆ, ಅಶೋಕ್‌ನ ಕೊಲೆಯ ಹಿಂದೆ ಮಹಿಳೆಯೊಬ್ಬರ ಕೈವಾಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿದ್ದ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಜನಾರ್ದನ ರೆಡ್ಡಿ ಮಾಡೆಲ್ ಹೌಸ್ಗೆ ಬೆಂಕಿ ಪ್ರಕರಣ | 6 ಮಂದಿ ಅಪ್ರಾಪ್ತರು ಸೇರಿ 8 ಜನ ಅರೆಸ್ಟ್


















