ಅಟ್ಲಾಂಟಾ/ನವದೆಹಲಿ: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಸೇರಿದಂತೆ ನಾಲ್ವರು ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರ ಕಚೇರಿ (Indian Mission) ಈ ಘಟನೆಯನ್ನು ಖಚಿತಪಡಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
ಘಟನೆಯ ವಿವರ:
ಬಂಧಿತ ಆರೋಪಿಯನ್ನು 51 ವರ್ಷದ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಜಗಳ ವಿಕೋಪಕ್ಕೆ ತಿರುಗಿದಾಗ ವಿಜಯ್ ಕುಮಾರ್ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಆತನ ಪತ್ನಿ ಮೀಮು ಡೋಗ್ರಾ (43), ಹಾಗೂ ಸಂಬಂಧಿಕರಾದ ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ.
ಕಪಾಟಿನಲ್ಲಿ ಅಡಗಿ ಪ್ರಾಣ ಉಳಿಸಿಕೊಂಡ ಮಕ್ಕಳು:
ಈ ಭೀಕರ ಹತ್ಯಾಕಾಂಡ ನಡೆದಾಗ ಮನೆಯಲ್ಲಿ ಮೂವರು ಮಕ್ಕಳಿದ್ದರು ಎಂಬುದು ಎದೆ ನಡುಗಿಸುವ ಸಂಗತಿಯಾಗಿದೆ. ಮನೆಯಲ್ಲಿ ಗುಂಡಿನ ಸದ್ದು ಕೇಳಿಸುತ್ತಿದ್ದಂತೆಯೇ ಭಯಭೀತರಾದ ಮಕ್ಕಳು, ಪ್ರಾಣ ಉಳಿಸಿಕೊಳ್ಳಲು ಮನೆಯಲ್ಲಿದ್ದ ಕಪಾಟಿನೊಳಗೆ (Closet) ಹೋಗಿ ಅಡಗಿಕೊಂಡಿದ್ದರು. ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲವಾದರೂ, ಕೌಟುಂಬಿಕ ಕಲಹವೇ ಇದಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮದುವೆ ಮನೆಯಲ್ಲೇ ಆತ್ಮಾಹುತಿ ಬಾಂಬ್ ಸ್ಫೋಟ | 7 ಸಾವು, 25 ಮಂದಿಗೆ ಗಾಯ



















