ಬೆಂಗಳೂರು : ಅಕ್ರಮ ಬಾಂಗ್ಲಾ ವಲಸಿಗರನ್ನ ಬಯಲಿಗೆಳೆದಿದ್ದಕ್ಕೆ ಪೊಲೀಸರು ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ವಿಧಾನಸೌಧದ ಬಾಗಿಲಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ.
ಡಾ. ನಾಗೇಂದ್ರ ಶಿರೂರು ವಿಧಾನಸೌಧದ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಬಾಂಗ್ಲಾದೇಶದವರು ಎಲ್ಲೆಲ್ಲಿ ಇದ್ದಾರೆ ಎಂದು ಮಾಹಿತಿ ನೀಡುತ್ತಿದ್ದ ಎನ್ನಲಾಗುತ್ತಿದೆ.
ಸೂಲದೇವನಹಳ್ಳಿ ಪೊಲೀಸರು ಪ್ರತಿದಿನ ಮನೆಯ ಬಳಿ ಬಂದು ಕಿರುಕುಳ ನೀಡಿ ಹೊಡಿತಾ ಇದ್ದಾರೆ. ಜೊತೆಗೆ ತನ್ನ ಹೆಂಡತಿ ಮಕ್ಕಳಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ನಾಗೇಂದ್ರಪ್ಪ ಆರೋಪಿಸಿದ್ದಾರೆ. 20 ಜನ ಪೊಲೀಸರು, 3 ಪೊಲೀಸ್ ವಾಹನಗಳು ಪ್ರತಿನಿತ್ಯ ಮನೆ ಬಳಿ ಬಂದು ನಿಲ್ಲುತ್ತಾರೆ. ಬಾಂಗ್ಲಾದೇಶದವರನ್ನ ಓಡಿಸಲಿಕ್ಕೆ ನಾನು ಹೋರಾಟ ಮಾಡಿದ್ದೇ ತಪ್ಪಾ ಎಂದು ಕಣ್ಣೀರು ಹಾಕಿ, ಇದರಿಂದ ಮನನೊಂದು ವಿಷ ಸೇವಿಸಿದೆ ಎಂದು ಹೇಳಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ವಿಧಾನಸೌಧ ಪೊಲೀಸರು ತಕ್ಷಣ ಸ್ಪಂದಿಸಿ, ವಿಷದ ಬಾಟಲಿ ಕಿತ್ತುಕೊಂಡು ಅವರನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ವೈದ್ಯರ ಪ್ರಕಾರ ಡಾ. ನಾಗೇಂದ್ರ ಅವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೆಲಸ ಬಿಡುತ್ತೇನೆ ಎಂದಿದ್ದಕ್ಕೆ ಯುವತಿಗೆ ಬಟ್ಟೆ ಬಿಚ್ಚಿ ಹೊಡಿತೀನಿ ಎಂದ ಮಾಲೀಕ!



















