ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಮಾಸುವ ಮುನ್ನವೇ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದು ಕೋಟ್ಯಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ. ಈ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಪ್ರಾಪ್ತರು ಸೇರಿ ಒಟ್ಟು 8 ಜನರನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದ ನಿವಾಸಿಗಳಾದ 8 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುತ್ತಿರುವ ವೇಳೆ ಅಜಾಗರೂಕತೆಯಿಂದ ಅಥವಾ ದುರುದ್ದೇಶದಿಂದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ರುಕ್ಮಿಣಿ ಅವೆನ್ಯೂ ಲೇಔಟ್‌ನಲ್ಲಿರುವ ಸೈಟ್ ಇಂಜಿನಿಯರ್ ರಿಜ್ವಾನ್ ಅವರು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಉಲ್ಲೇಖಿಸಿದ ಪ್ರಕಾರ, ಶುಕ್ರವಾರ ಸಂಜೆ ಸುಮಾರು 5.30ರ ವೇಳೆಗೆ 20 ರಿಂದ 25 ವರ್ಷ ವಯಸ್ಸಿನ 8ರಿಂದ 10 ಮಂದಿ ಕಿಡಿಗೇಡಿಗಳು ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಮಾಡೆಲ್ ಹೌಸ್ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರಿಗೆ ಸೇರಿದ್ದಾಗಿದೆ. ಬೆಂಕಿಯಿಂದ ಟಿವಿ, ಕುರ್ಚಿಗಳು, ಸೋಫಾ ಸೆಟ್‌ಗಳು, ಕಿಚನ್ ಸೆಟ್, ಎಸಿ, ಫ್ರಿಡ್ಜ್, ವುಡನ್ ಬಾಗಿಲುಗಳು ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಂದಾಜು 1.25 ಕೋಟಿ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆಗೆ ಕಿರೀಟ ತಂದಿಟ್ಟ ಕ್ಯಾನ್ಸರ್ | ವೈದ್ಯರಿಗೆ, ಸಿಬ್ಬಂದಿಗೆ ಸಿಎಂ ಅಭಿನಂದನೆ



















