ಬೆಂಗಳೂರು : ಬೆಂಗಳೂರು ಮೆಟ್ರೋ ಆರೆಂಜ್ ಲೈನ್ ಕಾಮಗಾರಿ ಹಿನ್ನೆಲೆ ಜೆಪಿ ನಗರದಲ್ಲಿರುವ ಡಾಲರ್ಸ್ ಕಾಲೋನಿ ಜಂಕ್ಷನ್ ಫ್ಲೈಓವರ್ ಅನ್ನು ಡೆಮಾಲಿಷ್ ಮಾಡುವ ನಿರ್ಧಾರಕ್ಕೆ ಅಧಿಕಾರಿಗಳು ಕೈಗೊಂಡಿದ್ದಾರೆ.
ಜೆಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರ ಮಾರ್ಗದವರೆಗೆ ಆರೆಂಜ್ ಮೆಟ್ರೋ ಲೈನ್ ನಿರ್ಮಾಣವಾಗಲಿದ್ದು, ಈ ಮಾರ್ಗದಲ್ಲಿ ಡಬ್ಬಲ್ ಡೆಕ್ಕರ್ ಫ್ಲೈಓವರ್ ಜೊತೆಗೆ ಮೆಟ್ರೋ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಈಗಿರುವ ಫ್ಲೈಓವರ್ ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಫ್ಲೈಓವರ್ 2018ರಲ್ಲಿ ಉದ್ಘಾಟನೆಯಾಗಿತ್ತು. ಕೇವಲ 8 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಮೇಲ್ಸೇತುವೆ ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಜಯನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಬಹಳ ಅನುಕೂಲವಾಗಿತ್ತು. ಸುಮಾರು 1 ಕಿಲೋಮೀಟರ್ ವ್ಯಾಪ್ತಿಯ ಈ ಫ್ಲೈಓವರ್ ದೈನಂದಿನ ಟ್ರಾಫಿಕ್ ಒತ್ತಡ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು.
ಜೆಪಿ ನಗರದಿಂದ ಕೆಂಪಾಪುರ ಮಾರ್ಗದ ಆರೆಂಜ್ ಲೈನ್ ಯೋಜನೆಯ ಮೊದಲ ಪ್ಯಾಕೇಜ್‌ಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಈ ಪ್ಯಾಕೇಜ್‌ನಲ್ಲಿ ಫ್ಲೈಓವರ್ ಡೆಮಾಲಿಷ್ ಕೂಡ ಸೇರಿದೆ. ಮೊದಲ ಹಂತದಲ್ಲಿ ಜೆಪಿ ನಗರ 4ನೇ ಹಂತ, 5ನೇ ಹಂತ, ಕದಿರೇನಹಳ್ಳಿ ಹಾಗೂ ಕಾಮಾಕ್ಯ ಜಂಕ್ಷನ್‌ವರೆಗೆ ಮೆಟ್ರೋ ಕಾಮಗಾರಿ ನಡೆಯಲಿದೆ.
ಫ್ಲೈಓವರ್ ಡೆಮಾಲಿಷನ್ ಹಾಗೂ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜೆಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಧ್ಯವಾದಷ್ಟು ಬೇಗ ಮೆಟ್ರೋ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕಿದ್ವಾಯಿ ಆಸ್ಪತ್ರೆಗೆ ಕಿರೀಟ ತಂದಿಟ್ಟ ಕ್ಯಾನ್ಸರ್ | ವೈದ್ಯರಿಗೆ, ಸಿಬ್ಬಂದಿಗೆ ಸಿಎಂ ಅಭಿನಂದನೆ



















