ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಯುವಕ ಹಾಗೂ ದೂರದ ಚೀನಾದ ಯುವತಿಗೆ ವಿದೇಶದಲ್ಲಿ ವಿದ್ಯಾಭ್ಯಾಸದ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರ ಪೋಷಕರೂ ಮಕ್ಕಳ ಪ್ರೀತಿಯನ್ನು ಖುಷಿಯಿಂದ ಒಪ್ಪಿ ಬಂಧು ಬಾಂಧವರ ಸಮ್ಮುಖದಲ್ಲಿ ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನಡೆಸಿದ್ದಾರೆ.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡಿನ ಯುವಕ ರೂಪಕ್ ಮತ್ತು ಚೀನಾ ಮೂಲದ ಯುವತಿ ಜಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಓದುವಾಗ ಇಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ. ಚೀನಾದಿಂದ ಮಗಳನ್ನ ಕರೆತಂದು ಆಕೆಯ ಹೆತ್ತವರು ರೂಪಕ್ಗೆ ದಾರೆ ಎರೆದು ಕೊಟ್ಟಿದ್ದಾರೆ. ವೀಶೇಷ ಏನೆಂದರೆ ಹಿಂದೂ ಸಂಪ್ರದಾಯದಂತೆ, ಶಾಸ್ತ್ರೋಕ್ತವಾಗಿ ಮದುವೆ ನಡೆದಿದೆ. ಅಪ್ಪಟ ಭಾರತೀಯ ಶೈಲಿಯಲ್ಲಿ ದಂಪತಿ ಕಂಗೊಳಿಸಿದ್ದು, ವರ ರೂಪಕ್ ಪಂಚೆ, ಶರ್ಟ್ನಲ್ಲಿ ಮಿಂಚಿದರೆ, ವಧು ಜಡೆ ಚೀನಾದವಳಾದರೂ ಸೀರೆ ಉಟ್ಟಿದ್ದು ನೆರೆದಿದ್ದವರ ಹುಬ್ಬೇರಿಸಿದೆ.
ಭಾರತೀಯ ಸಂಪ್ರದಾಯವನ್ನು ಯುವತಿ ಮೆಚ್ಚಿದ್ದು, ಚಿಕ್ಕಮಗಳೂರಿನ ಸೌಂದರ್ಯ ಕಂಡು ಆಕೆ ಮಾರು ಹೋಗಿದ್ದಾಳೆ. ವಧು ರೂಪಕ್ ಚಿಕ್ಕಮಗಳೂರಿನವರಾದರೂ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ. ಯುವತಿಯೂ ಸದ್ಯ ಅಲ್ಲೇ ನೆಲೆಸಿರುವ ಕಾರಣ, ದಂಪತಿಯ ಮುಂದಿನ ಜೀವನವನ್ನು ವಿದೇಶದಲ್ಲಿಯೇ ಕಳೆಯಲ್ಲಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಗತಿ ಯುವಕ ಸಂಘದ ವತಿಯಿಂದ ಜ.25ಕ್ಕೆ ವೆಂಕಟೇಶ್ವರ ಸ್ವಾಮಿಯ ಅದ್ಧೂರಿ ಉತ್ಸವ


















