ಬೆಂಗಳೂರು: ಅಟಲ್ ಪಿಂಚಣಿ ಯೋಜನೆಯು (Atal Pension Yojana – APY) ಕೇಂದ್ರ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಅದರಲ್ಲೂ ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ. ಇಂತಹ ಯೋಜನೆಯನ್ನು ಕೇಂದ್ರ ಸರ್ಕಾರವೀಗ ಇನ್ನೂ 5 ವರ್ಷಗಳ ಅವಧಿಗೆ ವಿಸ್ತರಣೆ ಮಾಡಿದೆ. ಹಾಗಾಗಿ, ದೇಶದ ಜನ ಇದರ ಪ್ರಯೋಜನ ಪಡೆಯಬಹುದಾಗಿದೆ.
ಅಟಲ್ ಪಿಂಚಣಿ ಯೋಜನೆಯ ಚಂದಾದಾರರು 60 ವರ್ಷ ದಾಟಿದ ಬಳಿಕ ಅವರಿಗೆ ಮಾಸಿಕ ಪಿಂಚಣಿ ಖಾತ್ರಿಯನ್ನು ನೀಡುತ್ತದೆ. ಅವರು ಒಂದು ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿವರೆಗೆ ಪಿಂಚಣಿ ಪಡೆಯಬಹುದಾಗಿದೆ. ಪಿಂಚಣಿಯ ಮೊತ್ತವು ಅವರು ಆಯ್ಕೆ ಮಾಡಿಕೊಳ್ಳುವ ಪ್ರೀಮಿಯಂ ಮೇಲೆ ನಿರ್ಧಾರವಾಗುತ್ತದೆ.
ಒಂದು ವೇಳೆ ಯೋಜನೆಯ ಸದಸ್ಯರು ಮರಣ ಹೊಂದಿದರೆ, ಅವರ ಪತ್ನಿಗೆ ಪಿಂಚಣಿ ನೀಡಲಾಗುತ್ತದೆ. ಚಂದಾದಾರ ಮತ್ತು ಸಂಗಾತಿ ಇಬ್ಬರೂ ಮರಣ ಹೊಂದಿದ ಸಂದರ್ಭದಲ್ಲಿ, 60 ವರ್ಷಗಳವರೆಗೆ ಸಂಗ್ರಹವಾದ ಒಟ್ಟು ಪಿಂಚಣಿ ಮೊತ್ತವನ್ನು (ಚಂದಾದಾರರು ಸೂಚಿಸಿದ ನಾಮಿನಿಗೆ ನೀಡಲಾಗುತ್ತದೆ.
18 ರಿಂದ 40 ವರ್ಷಗಳ ಒಳಗಿನ ಭಾರತೀಯ ನಾಗರಿಕರು ಈ ಯೋಜನೆಗೆ ಸೇರಬಹುದು. ಕನಿಷ್ಠ 20 ವರ್ಷಗಳ ಕಾಲ ಹೂಡಿಕೆಮಾಡಬೇಕು. ನಿಮ್ಮ ಉಳಿತಾಯ ಖಾತೆ ಇರುವ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಮೂಲಕ ಖಾತೆಯನ್ನು ತೆರೆಯಬಹುದು. ಇದಕ್ಕೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿದೆ. 2022ರ ಅಕ್ಟೋಬರ್ 1 ರಿಂದ ಜಾರಿಗೆ ಬಂದಿರುವ ನಿಯಮದಂತೆ, ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿರುವ RRI ಸಂಸ್ಥೆಯಲ್ಲಿ ರಿಸರ್ಚ್ ಅಸಿಸ್ಟಂಟ್ ಹುದ್ದೆಗಳ ನೇಮಕ | ಕೂಡಲೇ ಅರ್ಜಿ ಸಲ್ಲಿಸಿ



















