ಬೆಂಗಳೂರು : ಬೆಂಗಳೂರು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಗೆ ಏರ್ಪೋರ್ಟ್ ಸಿಬ್ಬಂದಿಯಿಂದಲೇ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.

ಕೆಐಎಬಿಯಿಂದ ಕೊರಿಯಾಗೆ ತೆರಳಲು ಆಗಮಿಸಿದ್ದ ವಿದೇಶಿ ಮಹಿಳೆಯನ್ನು, ಚೆಕಿಂಗ್ ಹೆಸರಲ್ಲಿ ಬಂದ ಏರ್ಪೋರ್ಟ್ ಸಿಬ್ಬಂದಿ ಅಪಾನ್ ಅಹಮದ್ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಮಹಿಳೆಯ ಟಿಕೆಟ್ ಪರಿಶೀಲಿಸಿದ ಬಳಿಕ, ಬ್ಯಾಗ್‌ನಲ್ಲಿ ಬೀಪ್ ಸೌಂಡ್ ಬರುತ್ತಿದೆ ಎಂದು ಹೇಳಿ ಪ್ರತ್ಯೇಕವಾಗಿ ಚೆಕ್ ಮಾಡಬೇಕು ಎಂದು ಆರೋಪಿ ಹೇಳಿದ್ದಾನೆ.

ಚೆಕಿಂಗ್ ಕೌಂಟರ್‌ಗೆ ಹೋದರೆ ಪ್ಲೈಟ್‌ಗೆ ಲೇಟ್ ಆಗುತ್ತದೆ ಎಂದು ನಂಬಿಸಿ, ಆರೋಪಿ ಮಹಿಳೆಯನ್ನು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಚೆಕಿಂಗ್ ನೆಪದಲ್ಲಿ ಕೆಲ ಕಾಲ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ, ಹಿಂದಿನಿಂದ ತಬ್ಬಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಯು ಮಹಿಳೆಯನ್ನು ತಬ್ಬಿಕೊಂಡು ಅಂಗಾಂಗಗಳನ್ನು ಸ್ಪರ್ಶಿಸುತ್ತಿದ್ದಂತೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಳೆ. ಆ ನಂತರ ‘ಒಕೆ ಥ್ಯಾಂಕ್ ಯು’ ಎಂದು ಹೇಳಿ ಆರೋಪಿ ಶೌಚಾಲಯದಿಂದ ಹೊರಗೆ ಹೋಗಿದ್ದಾನೆ.
ಘಟನೆಯ ಬಳಿಕ ವಿದೇಶಿ ಮಹಿಳೆ ತಕ್ಷಣವೇ ಏರ್ಪೋರ್ಟ್ ಭದ್ರತಾ ಪಡೆಯ ಬಳಿ ಸಿಬ್ಬಂದಿಯ ಲೈಂಗಿಕ ಕಿರುಕುಳ ಹಾಗೂ ಅವಾಚ್ಯ ವರ್ತನೆ ಕುರಿತು ದೂರು ದಾಖಲಿಸಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ಏರ್ಪೋರ್ಟ್ ಭದ್ರತಾ ಪಡೆ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದೆ.
ಮಹಿಳೆಯ ದೂರಿನನ್ವಯ ಏರ್ಪೋರ್ಟ್ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅಪಾನ್ ಅಹಮದ್‌ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಪಾರ್ಕಿಂಗ್ ಜಾಗದಲ್ಲೇ ಪಾರ್ಕ್ ಮಾಡಿದ್ರೂ ಫೈನ್… ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಪೊಲೀಸರ ಕಿರಿಕ್!


















