ಬೆಂಗಳೂರು: ದೇಶದಲ್ಲೇ ಬೃಹತ್ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ವು ಕೋಟ್ಯಂತರ ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿದೆ. ಇನ್ ಸ್ಟಂಟ್ ಮನಿ ಟ್ರಾನ್ಸ್ ಫರ್ ಸರ್ವಿಸ್ (IMPS) ಮೂಲಕ ಹಣ ವರ್ಗಾವಣೆ ಮಾಡುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇಲ್ಲಿಯವರೆಗೆ ಉಚಿತವಾಗಿ ಲಭ್ಯವಿದ್ದ ಕೆಲವು ಆನ್ ಲೈನ್ ವಹಿವಾಟುಗಳ ಮೇಲೆ ಈಗ ಸೇವಾ ಶುಲ್ಕ ವಿಧಿಸಲು ಬ್ಯಾಂಕ್ ನಿರ್ಧರಿಸಿದೆ.
ಹೊಸ ನಿಯಮಗಳು ಮತ್ತು ಶುಲ್ಕಗಳು ಫೆಬ್ರವರಿ 15ರಿಂದ ಜಾರಿಗೆ ಬರಲಿವೆ. ತುರ್ತಾಗಿ ಹಣ ವರ್ಗಾವಣೆ ಮಾಡಲು ಐಎಂಪಿಎಸ್ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ವಿಶೇಷವಾಗಿ ಯುಪಿಐ ವಹಿವಾಟು ಮಿತಿ ಮೀರಿದಾಗ ಅಥವಾ ಹೆಚ್ಚಿನ ಮೊತ್ತದ ಹಣವನ್ನು ವರ್ಗಾಯಿಸಬೇಕಾದಾಗ ಇದು ಸಹಕಾರಿಯಾಗಿದೆ. ಆದರೆ, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳ ಕಾರಣದಿಂದಾಗಿ ಆನ್ ಲೈನ್ ಮೂಲಕ (ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯೋನೋ ಆ್ಯಪ್) ದೊಡ್ಡ ಮೊತ್ತ ವರ್ಗಾಯಿಸಿದರೆ ಶುಲ್ಕ ವಿಧಿಸಲು ಬ್ಯಾಂಕ್ ನಿರ್ಧರಿಸಿದೆ.
ಹೀಗಿರಲಿದೆ ಹಣ ವರ್ಗಾವಣೆ ಶುಲ್ಕ
25 ಸಾವಿರ ರೂಪಾಯಿವರೆಗೆ: ಯಾವುದೇ ಶುಲ್ಕವಿಲ್ಲ
25 ಸಾವಿರ ರೂ.ನಿಂದ 1 ಲಕ್ಷ ರೂಪಾಯಿ: 2 ರೂಪಾಯಿ + ಜಿಎಸ್ ಟಿ
1 ಲಕ್ಷದಿಂದ -2 ಲಕ್ಷ ರೂ.ವರೆಗೆ: 6 ರೂಪಾಯಿ + ಜಿಎಸ್ ಟಿ
2 ಲಕ್ಷದಿಂದ ರೂ. 5 ಲಕ್ಷ ರೂ.ವರೆಗೆ: ರೂ. 10 + ಜಿಎಸ್ ಟಿ
ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡಿ ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಿದರೆ ವಿಧಿಸುವ ಶುಲ್ಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂತಹ ವಹಿವಾಟುಗಳಿಗೆ ಹಳೆಯ ಶುಲ್ಕಗಳೇ ಅನ್ವಯವಾಗುತ್ತವೆ. ವಹಿವಾಟಿನ ಮೊತ್ತಕ್ಕೆ ಅನುಗುಣವಾಗಿ 2 ರೂಪಾಯಿಯಿಂದ 20 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತದೆ.
ಎಲ್ಲ ಗ್ರಾಹಕರ ಮೇಲೆ ಹೊರೆಯಾಗದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ವಿಶೇಷ ಖಾತೆಗಳಿಗೆ ಈ ಹೊಸ ಶುಲ್ಕಗಳಿಂದ ವಿನಾಯಿತಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರು, ರೈಲ್ವೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ಹೊಸ ಶುಲ್ಕಗಳು ಅನ್ವಯವಾಗುವುದಿಲ್ಲ.
ಇದನ್ನೂ ಓದಿ; ಆದಾಯ ತೆರಿಗೆ ಇಲಾಖೆಯಲ್ಲಿ 11 ಹುದ್ದೆಗಳ ನೇಮಕಾತಿ : 39 ಸಾವಿರ ರೂ. ಸ್ಯಾಲರಿ



















