ಬೆಂಗಳೂರು : ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಇಂದು ಮಧ್ಯಾಹ್ನ ಗೊಂದಲ ಸೃಷ್ಟಿಯಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಪೇಷಂಟ್‌ಗಳು ಹಾಗೂ ಅವರ ಪೋಷಕರನ್ನೇ ಟಾರ್ಗೆಟ್ ಮಾಡಿ ಪೊಲೀಸರು ವಾಹನಗಳಿಗೆ ವೀಲ್ ಲಾಕ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಾರ್ಕಿಂಗ್ ಬೋರ್ಡ್ ಹಾಕಿರುವ ಜಾಗದಲ್ಲೇ ವಾಹನಗಳನ್ನು ನಿಲ್ಲಿಸಿದರೂ ಕೂಡ ಪೊಲೀಸರು ವೀಲ್ ಲಾಕ್ ಮಾಡುತ್ತಿದ್ದಾರೆ ಎಂದು ಹೊರರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾರ್ಕ್ ಮಾಡಿದ್ದ ಸ್ಥಳದಲ್ಲೇ ವಾಹನಗಳಿಗೆ ಲಾಕ್ ಹಾಕಿದ ಪರಿಣಾಮ, ವೀಲ್ ಲಾಕ್ ಮಾಡಿದ ವಾಹನಗಳ ಬಳಿ ಪೊಲೀಸರ ವಿರುದ್ಧ ಭಾರೀ ಅಸಮಾಧಾನ ವ್ಯಕ್ತವಾಗಿದೆ.
ವಿಶೇಷವಾಗಿ ಪೇಷಂಟ್‌ಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಂತಹ ವಾಹನಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ. ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಪೇಷಂಟ್ ಒಬ್ಬರ ಕಾರಿಗೆ ವೀಲ್ ಲಾಕ್ ಮಾಡಿದ್ದರಿಂದ ಪೇಷಂಟ್ ಪೋಷಕರು ಕಣ್ಣೀರು ಹಾಕಿ ತಮ್ಮ ಅಳಲನ್ನು ಹೊರಹಾಕಿದ್ದಾರೆ.
ಪೊಲೀಸರ ಈ ನಡೆ ವಿರುದ್ಧ ಸುಮಾರು ನಾಲ್ಕು ಐದು ಪೇಷಂಟ್‌ಗಳ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಮಾನವೀಯತೆಯಿಲ್ಲದ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಕೆಲಕಾಲ ವಿಕ್ಟೋರಿಯಾ ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾದ ಪುಂಡರ ಹಾವಳಿ | ಬೈಕ್ ನಂಬರ್ ಪ್ಲೇಟ್ ಕಳಚಿ ಗುಂಪು ಗುಂಪಾಗಿ ಬಂದು ವ್ಹೀಲಿಂಗ್


















