ಪುತ್ತೂರು: ಜಡ್ಜ್ ಮುಂದೆಯೇ ವಿಷ ಸೇವಿಸಿ ವ್ಯಕ್ತಿಯು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಮಂಗಳವಾರ ಸಂಭವಿಸಿದೆ. ಪುತ್ತೂರಿ ಕಾವು ಮಣಿಯಡ್ಕ ನಿವಾಸಿ ರವಿ(35) ಆತ್ಮಹತ್ಯೆಗೆ ಯತ್ನಿಸಿದವನು..
ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ಕಳೆದ ಕೆಲ ದಿನಗಳಿಂದ ಗಂಭೀರ ಕಲಹ ನಡೆಯುತ್ತಿದ್ದು, ಎರಡು ದಿನಗಳ ಹಿಂದೆ ವಿದ್ಯಾಶ್ರೀ ಅವರ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಿಚ್ಛೇದನದ ಮಾತುಕತೆಯೂ ನಡೆದಿತ್ತು.
ಇಂದು ಸಂಪ್ಯ ಠಾಣೆಗೆ ಹಾಜರಾಗುವಂತೆ ಪೊಲೀಸರಿಂದ ಸೂಚನೆ ಪಡೆದಿದ್ದ ರವಿ, ಠಾಣೆಗೆ ಹೋಗುವ ಬದಲು ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಬಂದು ಜಡ್ಜ್ ಮುಂದೆ ವಿಷ ಸೇವಿಸಿದ್ದಾನೆ. ಈ ಬಗ್ಗೆ ಮುನ್ನೆಚ್ಚರಿಕೆಯಾಗಿ ಜಡ್ಜ್ ಅವರು ಅಲ್ಲಿನ ಸಿಬ್ಬಂದಿಗೆ ಸೂಚನೆ ನೀಡಿದ್ದರೆನ್ನಲಾಗಿದೆ.
ವಿಷ ಸೇವನೆಯ ಬಳಿಕ ರವಿ ನ್ಯಾಯಾಲಯದಲ್ಲೇ ವಾಂತಿ ಮಾಡಿದ್ದು, ತಕ್ಷಣ ಎಚ್ಚೆತ್ತ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಗೇರು ತೋಟಕ್ಕೆ ಸಿಂಪಡಿಸುವ ‘ಕರಾಟೆ’ ಎಂಬ ಕೀಟನಾಶಕವನ್ನು ರವಿ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ. ವಿಷ ಸೇವನೆಯಿಂದ ರವಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ.
ಆತ್ಮಹತ್ಯೆ ಯತ್ನದ ಬಳಿಕ ದಂಪತಿ ಒಂದಾಗಿ ಮಂಗಳೂರು ಆಸ್ಪತ್ರೆಗೆ ಸಾಗಿದ್ದು, ಒಂದೇ ಆಂಬ್ಯುಲೆನ್ಸ್‌ನಲ್ಲಿ ಗಂಡ-ಹೆಂಡತಿ ತೆರಳಿದ ದೃಶ್ಯ ಗಮನ ಸೆಳೆದಿದೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಫರೀದಾಬಾದ್‌ನ ‘ಸೈಕೋ ಕಿಲ್ಲರ್’ ಸಿಂಗ್ ರಾಜ್‌ಗೆ ಜೀವಾವಧಿ ಶಿಕ್ಷೆ



















