ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಭಾಷಣ ಮುಗಿಸಿ ಹೊರಟ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಶಾಸಕರು ಅಡ್ಡಿಗಟ್ಟಿರುವುದನ್ನು ಖಂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಇದೊಂದು ‘ಕರಾಳ ದಿನ’ ಎಂದು ಕರೆದಿದ್ದಾರೆ.
ಈ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಸಂವಿಧಾನ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಧನ್ಯವಾದ ಹೇಳಿ ಹೊರಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಭಾಷಣವನ್ನು ಓದದೇ ಹೊರಡುವುದಕ್ಕೂ ಅವರಿಗೆ ಅಧಿಕಾರವಿದೆ ಎಂದು ಅಶೋಕ್ ಹೇಳಿದರು. ಆದರೆ ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದು ಗೂಂಡಾಗಿರಿ ಎಂದು ಕಿಡಿಕಾರಿದರು.
ರಾಜ್ಯಪಾಲರಿಗೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಶೋಕ್, ಈ ಕುರಿತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ನೀಡುವುದಾಗಿ ತಿಳಿಸಿದರು. ಸದನದಲ್ಲಿ ಅಗೌರವ ತೋರಿದವರನ್ನು ಹೊರಹಾಕಬೇಕು ಎಂದೂ ಒತ್ತಾಯಿಸಿದರು. ಇದೇ ರಾಜ್ಯಪಾಲರು ಸರ್ಕಾರದ ಅನೇಕ ಬಿಲ್‌ಗಳಿಗೆ ಸಹಿ ಹಾಕಿದ್ದಾರೆ. ಆಗ ರಾಜ್ಯಪಾಲರು ಸರಿಯಾಗಿದ್ದರಾ ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದಾರೆ.
ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿಸಲು ‘ಕೈ’ ಸರ್ಕಾರ ಹೊರಟಿದೆ. ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಕುತಂತ್ರ ಇದಾಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ | ಸಿದ್ದರಾಮಯ್ಯ ಗರಂ



















