ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣ ಓದದೇ ತಾವೇ ತಯಾರು ಮಾಡಿದ ಭಾಷಣ ಮಾಡಿದ್ದಾರೆ. ಈ ಮೂಲಕ ಸಂವಿಧಾನದ ವಿಧಿಯನ್ನ ಉಲ್ಲಂಘನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷದ ಮೊದಲ ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಭಾರೀ ಹೈಡ್ರಾಮ ನಡೆಯಿತು. ರಾಜ್ಯಪಾಲರು ಅಧಿವೇಶನ ಆರಂಭಿಸಿ ಆರಂಭಿಕ ಸಾಲನ್ನು ಹೇಳಿ ಸದನದಿಂದ ಹೊರ ನಡೆದರು. ರಾಜ್ಯಪಾಲರ ಈ ನಡೆ ವಿಪಕ್ಷಗಳ ನಡುವೆ ಭಾರೀ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ರಾಜ್ಯಪಾಲರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಸರ್ಕಾರ ಬಂದಾಗ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಆರ್ಟಿಕಲ್ 176(1), 163 ರ ಉಲ್ಲಂಘನೆ ಬಹಳ ಸ್ಪಷ್ಟವಾಗಿದೆ. ಈ ವಿಧಿಗಳ ಅನ್ವಯ ರಾಜ್ಯಪಾಲರು ತಾವು ತಯಾರು ಮಾಡಿದ ಭಾಷಣ ಓದುವಂತಿಲ್ಲ. ರಾಜ್ಯ ಸರ್ಕಾದ ಸಂಪುಟ ಸಿದ್ಧಪಡಿಸಿದ ಭಾಷಣವನ್ನ ಓದಲೇಬೇಕು ಎಂದು ಹೇಳಿದರು.
ಇಂದು ಜಂಟಿ ಅಧಿವೇಶನ ಜೊತೆಗೆ ವಿಶೇಷ ಅಧಿವೇಶನ ಕರಿದಿದ್ವಿ. ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನ ತಗೆದು, ಜಿ ರಾಮಜೀ ಹೊಸ ಕಾಯ್ದೆ ಮಾಡಿದ್ದಾರೆ. ಇದನ್ನು ನಮ್ಮ ಸರ್ಕಾರದ್ದು ತೀವ್ರ ವಿರೊಧವಿದೆ. ಒಂದು ಮಹತ್ಮಾಗಾಂಧಿಜೀ ಅವರ ಹೆಸರು ತೆಗೆದುಹಾಕಿದ್ದಕ್ಕೆ ಹಳ್ಳಿಗಾಡನಲ್ಲಿ ಇರುವಂತಹ ಬಡ ಕಾರ್ಮಿಕರಿಗೆ ಕನಿಷ್ಠ 100 ದಿನ ಉದ್ಯೋಗ ಕೊಡಬೇಕು ಎಂಬುದು ಈ ಹಿಂದೆ ಮಾಡಿದ್ದರು, ಇದರಲ್ಲಿ ಉದ್ಯೋಗ ಕೊಡುತ್ತಿವೆ ಎಂಬುವುದು ಖಾತ್ರಿ ಇಲ್ಲ.ಮೊದಲು ಅವರ ಜಮೀನಿನಲ್ಲಿ ಕೆಲಸ ಮಾಡಬಹುದಿತ್ತು, ಇದರಲ್ಲಿ ಎಲ್ಲಿ ಕೆಲಸ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತದೆ ಎಂದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ, ರಾಜ್ಯಪಾಲ ಗೆಹ್ಲೋಟ್ ಸಂವಿಧಾನದ ಪ್ರಕಾರ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿಲ್ಲ. ಈ ವರ್ತನೆಯ ವಿರುದ್ಧ ನಾವು ಪ್ರತಿಭಟಿಸುತ್ತೇವೆ, ಅವರ ನಡವಳಿಕೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕೆ ಎಂದು ಸರ್ಕಾರ ಪರಿಶೀಲಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಅಧಿವೇಶನದಲ್ಲಿ ಭಾರೀ ಹೈಡ್ರಾಮಾ | ಭಾಷಣ ಓದದೇ ತೆರಳಿದ ರಾಜ್ಯಪಾಲರು!



















