ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿಗಳಿಗೆ ಇರುವ ಬೇಡಿಕೆಯನ್ನು ಮನಗಂಡಿರುವ ಸ್ಕೋಡಾ ಇಂಡಿಯಾ, ಬಹುನಿರೀಕ್ಷಿತ ಕುಶಾಕ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಅಂತಿಮವಾಗಿ ಅನಾವರಣಗೊಳಿಸಿದೆ. ಹಳೆಯ ಮಾದರಿಗಿಂತ ಹೆಚ್ಚು ಪ್ರೀಮಿಯಂ ಮತ್ತು ತಾಂತ್ರಿಕವಾಗಿ ಶ್ರೀಮಂತವಾಗಿರುವ ಈ ಹೊಸ ಎಸ್‌ಯುವಿ, ಗ್ರಾಹಕರಿಗೆ ಐಷಾರಾಮಿ ಅನುಭವ ನೀಡಲು ಸಜ್ಜಾಗಿದೆ.

ವಿಶೇಷವೆಂದರೆ, ಬಿಡುಗಡೆಯ ದಿನವೇ ಸ್ಪೋರ್ಟಿ ಲುಕ್ ನೀಡುವ ‘ಮಾಂಟೆ ಕಾರ್ಲೊ’ ಆವೃತ್ತಿಯೂ ಲಭ್ಯವಿರುವುದು ವಾಹನ ಪ್ರಿಯರ ಹುಬ್ಬೇರಿಸಿದೆ. ಕ್ಲಾಸಿಕ್ ಪ್ಲಸ್, ಸಿಗ್ನೇಚರ್, ಸ್ಪೋರ್ಟ್‌ಲೈನ್, ಪ್ರೆಸ್ಟೀಜ್ ಮತ್ತು ಮಾಂಟೆ ಕಾರ್ಲೊ ಎಂಬ ಐದು ವಿಭಿನ್ನ ಟ್ರಿಮ್‌ಗಳಲ್ಲಿ ಇದು ದೊರೆಯಲಿದೆ.
ಹೆಚ್ಚು ಐಷಾರಾಮಿ

ಹೊಸ ಕುಶಾಕ್‌ನ ವಿನ್ಯಾಸದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಹಿಂದಿನ ಆವೃತ್ತಿಗಿಂತ ಹೆಚ್ಚು ಐಷಾರಾಮಿಯಾಗಿ ಕಾಣುತ್ತಿದೆ. ಮುಂಭಾಗದಲ್ಲಿ ಹೊಸದಾದ ದೊಡ್ಡ ಗ್ರಿಲ್ ನೀಡಲಾಗಿದ್ದು, ಇದರಲ್ಲಿ ಇಲ್ಯುಮಿನೇಟೆಡ್ ಲೈಟ್ ಬ್ಯಾಂಡ್ (ಬೆಳಕಿನ ಪಟ್ಟಿ) ಅಳವಡಿಸಿರುವುದು ಕಾರಿನ ಅಂದವನ್ನು ಹೆಚ್ಚಿಸಿದೆ. ಸಿಗ್ನೇಚರ್ ಮತ್ತು ಮೇಲಿನ ವೆರಿಯೆಂಟ್‌ಗಳಲ್ಲಿ ಎಲ್‌ಇಡಿ ಲೈಟಿಂಗ್ ಪ್ಯಾಕೇಜ್ ಮತ್ತು ಸೀಕ್ವೆನ್ಶಿಯಲ್ ಟರ್ನ್ ಇಂಡಿಕೇಟರ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿಯೂ ಕನೆಕ್ಟೆಡ್ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಪ್ರಕಾಶಮಾನವಾದ ಸ್ಕೋಡಾ ಅಕ್ಷರಗಳನ್ನು ಕಾಣಬಹುದು. ಹೊಸ ಬಂಪರ್ ವಿನ್ಯಾಸದಿಂದಾಗಿ ಕಾರಿನ ಉದ್ದವು 4 ಮಿಲಿಮೀಟರ್‌ಗಳಷ್ಟು ಹೆಚ್ಚಾಗಿದ್ದು, ಒಟ್ಟು 4,229 ಎಂಎಂ ಉದ್ದವನ್ನು ಹೊಂದಿದೆ. ಶಿಮ್ಲಾ ಗ್ರೀನ್, ಚೆರ್ರಿ ರೆಡ್ ಮತ್ತು ಸ್ಟೀಲ್ ಗ್ರೇ ಸೇರಿದಂತೆ ಮೂರು ಹೊಸ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ಕಾರಿನ ಒಳಾಂಗಣ ವಿನ್ಯಾಸ ಮತ್ತು ಸೌಕರ್ಯಗಳ ವಿಷಯದಲ್ಲಿ ಸ್ಕೋಡಾ ಈ ಬಾರಿ ರಾಜಿ ಮಾಡಿಕೊಂಡಿಲ್ಲ. ಹಿಂಬದಿ ಸೀಟುಗಳಿಗೆ ಮಸಾಜ್ ಫಂಕ್ಷನ್ ನೀಡಿರುವುದು ಈ ವಿಭಾಗದಲ್ಲೇ ಒಂದು ವಿಶೇಷ ಸೇರ್ಪಡೆಯಾಗಿದೆ. ಜೊತೆಗೆ ಪನೋರಮಿಕ್ ಸನ್‌ರೂಫ್, 10.25 ಇಂಚಿನ ಡಿಜಿಟಲ್ ಕಾಕ್‌ಪಿಟ್, ಡ್ಯುಯಲ್-ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಕ್ಯಾಬಿನ್ ಅನುಭವವನ್ನು ಹೆಚ್ಚಿಸಿವೆ.
ಇನ್ಫೋಟೈನ್‌ಮೆಂಟ್ಗಾಗಿ 10.1 ಇಂಚಿನ ಟಚ್‌ಸ್ಕ್ರೀನ್ ನೀಡಲಾಗಿದ್ದು, ಗೂಗಲ್ ಆಟೋಮೋಟಿವ್ ಎಐ ಏಜೆಂಟ್ ಮೂಲಕ ವಾಯ್ಸ್ ಕಮಾಂಡ್‌ಗಳು ಕಾರ್ಯನಿರ್ವಹಿಸಲಿವೆ. ಬೂಟ್ ಸ್ಪೇಸ್ ವಿಚಾರದಲ್ಲೂ ಭಾರಿ ಸುಧಾರಣೆ ಕಂಡುಬಂದಿದ್ದು, ಹಳೆಯ ಮಾದರಿಯಲ್ಲಿದ್ದ 385 ಲೀಟರ್ ಸಾಮರ್ಥ್ಯವನ್ನು ಬರೋಬ್ಬರಿ 491 ಲೀಟರ್‌ಗೆ ಏರಿಸಲಾಗಿದೆ.
ಎಂಜಿನ್ನಲ್ಲೂ ಬದಲಾವಣೆ
ಎಂಜಿನ್ ವಿಭಾಗದಲ್ಲಿಯೂ ಮಹತ್ತರ ಬದಲಾವಣೆಗಳನ್ನು ಕಾಣಬಹುದು. ಈ ಕಾರು 1.0 ಲೀಟರ್ ಮತ್ತು 1.5 ಲೀಟರ್ ಟಿಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಮುಂದುವರಿಸಿದೆ. ಆದರೆ, 1.0 ಲೀಟರ್ ಎಂಜಿನ್‌ನೊಂದಿಗೆ ಈ ಹಿಂದೆ ಇದ್ದ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಬದಲಿಗೆ, ಹೊಚ್ಚ ಹೊಸ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ (AQ300) ಅಳವಡಿಸಲಾಗಿದೆ. ಇದು ಚಾಲನಾ ಅನುಭವವನ್ನು ಮತ್ತಷ್ಟು ಮೃದುವಾಗಿಸಲಿದೆ. ಶಕ್ತಿಶಾಲಿ 1.5 ಲೀಟರ್ ಎಂಜಿನ್ ಕೇವಲ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್‌ನೊಂದಿಗೆ ಪ್ರೆಸ್ಟೀಜ್ ಮತ್ತು ಮಾಂಟೆ ಕಾರ್ಲೊ ವೆರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ.
ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಸ್ಕೋಡಾ, ಈ ಕಾರಿನಲ್ಲಿ 40ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದ್ದು, ಅದರಲ್ಲಿ 25 ವೈಶಿಷ್ಟ್ಯಗಳು ಎಲ್ಲಾ ವೆರಿಯೆಂಟ್‌ಗಳಲ್ಲಿ ಸ್ಟಾಂಡರ್ಡ್ ಆಗಿ ಬರಲಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಎಡಿಎಎಸ್ (ADAS) ತಂತ್ರಜ್ಞಾನವನ್ನು ಈ ಫೇಸ್‌ಲಿಫ್ಟ್ ಆವೃತ್ತಿಯಲ್ಲಿಯೂ ನೀಡದಿರುವುದು ಗ್ರಾಹಕರಿಗೆ ತುಸು ನಿರಾಸೆ ಮೂಡಿಸಬಹುದು. ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ ತಿಂಗಳಲ್ಲಿ ಗ್ರಾಹಕರ ಕೈಗೆ ಕಾರು ತಲುಪುವ ನಿರೀಕ್ಷೆಯಿದೆ.



















