ಮೈಸೂರು : ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ತಹಶಿಲ್ದಾರ್ ಕಚೇರಿ ಮುಂಭಾಗ ಅಕ್ರಮ ರೆಸಾರ್ಟ್ಸ್ ವಿರುದ್ಧದ ಪ್ರತಿಭಟನೆ ಎರಡನೇ ದಿನಕ್ಕೂ ಕಾಲಿಟ್ಟಿದೆ. ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ರೆಸಾರ್ಟ್ಸ್‌ಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು, ಕನ್ನಡಪರ ಹೋರಾಟಗಾರರು ಹಾಗೂ ವಕೀಲರು ಧರಣಿ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ನುಗ್ಗಿ ರೈತರ ಮೇಲೆ ದಾಳಿ ನಡೆಸಿರುವ ಹುಲಿಗಳ ಹಿಂದೆಯೂ ಈ ಅಕ್ರಮ ರೆಸಾರ್ಟ್ಸ್‌ಗಳೇ ಕಾರಣವೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅರಣ್ಯ ಪ್ರದೇಶದ ಅಕ್ರಮ ಅತಿಕ್ರಮಣದಿಂದ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಇದರಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸರ್ಕಾರ ಸಫಾರಿ ಚಟುವಟಿಕೆಯನ್ನು ಬಂದ್ ಮಾಡಿದ್ದರೂ, ಅಕ್ರಮ ರೆಸಾರ್ಟ್ಸ್‌ಗಳ ವಿರುದ್ಧ ಇನ್ನೂ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆ ರೆಸಾರ್ಟ್ಸ್‌ಗಳ ಸಂಪೂರ್ಣ ತೆರವುಗೆ ಒತ್ತಾಯಿಸಿ ಹೋರಾಟ ತೀವ್ರಗೊಳಿಸಲಾಗಿದೆ.
ಪ್ರತಿಭಟನೆಯಲ್ಲಿ ವಕೀಲ ವಿ. ರವಿಕುಮಾರ್, ರೈತ ಮುಖಂಡ ಹೊನ್ನೂರು ಪ್ರಕಾಶ್, ಮಂಜು ಕಿರಣ್ ಸೇರಿದಂತೆ 11ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಇದನ್ನೂ ಓದಿ : ಉಡುಪಿ | ಸಿದ್ದಾಪುರ ಏತ ನೀರಾವರಿ ಯೋಜನೆಗೆ ಒತ್ತಾಯಿಸಿ ಜನಾಗ್ರಹ ಸಭೆ, ರೈತರ ಪ್ರತಿಭಟನೆ



















