ಗದಗ : ಐತಿಹಾಸಿಕ ಸ್ಥಳ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 5ನೇ ದಿನದ ಉತ್ಖನನ ಕಾರ್ಯ ಅಂತ್ಯವಾಗಿದ್ದು, ಭೂಮಿ ಅಗೆದಂತೆಲ್ಲಾ ಅನೇಕ ಶಿಲಾಕೃತಿಗಳು, ಕುರುಹುಗಳು ಪತ್ತೆಯಾಗುತ್ತಿವೆ. ಇಂದು ಒಡೆದ ಮಡಿಕೆ ಆಕೃತಿಯ ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಐತಿಹಾಸಿಕ ದೇವಸ್ಥಾನವನ್ನು ಮನೆಯನ್ನಾಗಿಸಿಕೊಂಡು ನಾಲ್ಕೈದು ಕುಟುಂಬಗಳು, ನಾಲ್ಕೈದು ತಲೆಮಾರುಗಳಿಂದ ವಾಸ ಮಾಡುತ್ತಿರುವುದು ಪತ್ತೆಯಾಗಿದೆ.

ಹೌದು, ಗದಗದ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗಿದ್ದು, 35 ಜನ ಕಾರ್ಮಿಕರಿಂದ ಉತ್ಖನನ ಕಾಮಗಾರಿ ನಡೆಯುತ್ತಿದೆ. ಇಂದು ಉತ್ಖನನ ವೇಳೆ ಒಡೆದ ಮಡಿಕೆಯ ಅವಶೇಷ ಪತ್ತೆಯಾಗಿದೆ. ಸಿಕ್ಕ ಒಡೆದ ಮಡಿಕೆ ಹಳೆಯ ಕಾಲದ್ದು ಎನ್ನಲಾಗಿದೆ. ಈ ಪ್ರಾಚ್ಯಾವಶೇಷವನ್ನು ತುಂಬಾ ನಾಜೂಕಿನಿಂದ ಸ್ವಚ್ಛಗೊಳಿಸಿ, ಅದನ್ನು ಹೊರ ತೆಗೆಯುವ ಕೆಲಸ ಸಿಬ್ಬಂದಿಗಳು ಮಾಡಿದ್ದಾರೆ. ಈ ಮಡಿಕೆ ಅವಶೇಷ ಯಾವ ಕಾಲದ್ದು, ಇದು ದವಸ ಧಾನ್ಯಗಳನ್ನು ಸಂಗ್ರಹಿಸುವ ಮಡಿಕೆನಾ? ಚಿನ್ನ, ಆಭರಣಗಳನ್ನು ಇರಿಸಿದ್ದ ಮಡಿಕೆಯಾ ಎಂಬ ಬಗ್ಗೆ ಕುತೂಕಲ ಮೂಡಿಸಿದೆ. ಈ ಮಡಿಕೆ ಒಳ ಭಾಗದ ಮಣ್ಣನ್ನು ಸಹ ಕಾರ್ಮಿಕರು ಪರಿಶೀಲನೆ ಮಾಡ್ತಿದ್ದಾರೆ.

ದೇವಸ್ಥಾನದೊಳಗೆಯೇ ಮನೆ |
ಇನ್ನು ಲಕ್ಕುಂಡಿಯಲ್ಲಿ ಮನೆಯೊಳಗೊಂದು ಐತಿಹಾಸಿಕ ದೇವಸ್ಥಾನ ಪತ್ತೆಯಾಗಿದೆ. ಈ ದೇವಸ್ಥಾನ ಚಾಲುಕ್ಯರ ಕಾಲದ ಪುರಾತನ ಕಾಲದ್ದು ಎನ್ನಲಾಗುತ್ತಿದೆ. ಇದು ಹೊರಗೆ ನೋಡಿದ್ರೆ ಮನೆ ಆಕಾರದಲ್ಲಿದೆ. ಒಳಗೆ ಹೋದರೆ ಪುರಾತನ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಚೌಕಿಮಠ ಎಂಬ ಐದು ಕುಟುಂಬಗಳು ನಾಲ್ಕೈದು ತಲೆಮಾರುಗಳಿಂದ ವಾಸ ಮಾಡುತ್ತಿದ್ದಾರೆ.

ಈ ದೇವಸ್ಥಾನವೇ ಈ ಕುಟುಂಬಸ್ಥರಿಗೆ ಸೂರಾಗಿದೆ. ಈ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನವಿದೆ. ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ. ಈ ದೇವಸ್ಥಾನ ಆವರಣದಲ್ಲಿ ಶರಣಯ್ಯ, ಶೇಖರಯ್ಯ, ಬಸಮ್ಮ, ಈರಯ್ಯ, ಕೊಟ್ರಯ್ಯ ಹಾಗೂ ಈರಮ್ಮ ಚೌಕಿಮಠ ಎಂಬ ಐದು ಕುಟುಂಬ ವಾಸ ಮಾಡುತ್ತಿವೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಿದ್ರೆ ಬಿಟ್ಟುಕೊಡ್ತೀವಿ ಎಂದು ಚೌಕಿಮಠ ಕುಟುಂಬಸ್ಥರು ಹೇಳುತ್ತಿದ್ದಾರೆ. ದೇವಸ್ಥಾನವನ್ನು ಮನೆ ಮಾಡಿಕೊಂಡ ಕುಟುಂಬಸ್ಥರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಈ ದೇವಸ್ಥಾನವನ್ನು ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡುವ ಪ್ಲಾನ್‌ಗೆ ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಇಲ್ಲಿನ ಕುಟುಂಬ ಆತಂಕಕ್ಕೆ ಒಳಗಾಗಿದೆ.
ಇದನ್ನೂ ಓದಿ : ಕಳಪೆ ಕಾಮಗಾರಿ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್, ಮೇಸ್ತ್ರಿಗೆ ಹಲ್ಲೆ | ಮೂವರು ನಕಲಿ ಪತ್ರಕರ್ತರ ಬಂಧನ!



















