ಬೆಂಗಳೂರು | ಸರ್ಕಾರಿ ಕಚೇರಿಯಲ್ಲೇ ಮಹಿಳೆಯ ಜೊತೆಗೆ ರಾಸಲೀಲೆಯಲ್ಲಿ ತೊಡಗಿದ್ದ ಡಿಜಿಪಿ ರಾಮಚಂದ್ರರಾವ್ ಅವರ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯ ಮಹಿಳಾ ಆಯೋಗವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಮಹಿಳೆಯರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಡಿಜಿಪಿ ರಾಮಚಂದ್ರರಾವ್ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದೆ.
ಐಪಿಎಸ್ ಅಧಿಕಾರಿಯಾದ ಡಾ.ರಾಮಚಂದ್ರರಾವ್ ರವರು ತಮ್ಮ ಕಛೇರಿಯಲ್ಲಿ ಸಮವಸ್ತ್ರಧಾರಿಗಳಾಗಿದ್ದ ಸಂದರ್ಭದಲ್ಲಿಯೇ ಮಹಿಳೆಯರೊಂದಿಗೆ ಆಶ್ಲೀಲವಾಗಿ ಹಾಗೂ ಲೈಂಗಿಕ ದೌರ್ಜನ್ಯ ಎಸಗುವ ರೀತಿಯಲ್ಲಿ ನಡೆದುಕೊಂಡಿರುವ ಹೀನಾಯ ಕೃತ್ಯದ ಬಗ್ಗೆ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿರುವ ದೃಶ್ಯಾವಳಿಗಳನ್ನು ಗಮನಿಸಿ, ರಾಜ್ಯ ಮಹಿಳಾ ಆಯೋಗವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

ಮಹಿಳೆಯರಿಗೆ ರಕ್ಷಣೆಗೆ ನೀಡಬೇಕಾದ, ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಯೇ ಈ ರೀತಿಯ ಆಸಭ್ಯ ವರ್ತನೆಯಲ್ಲಿ ತೊಡಗಿರುವುದು ರಾಜ್ಯದ ಮಹಿಳೆಯರಲ್ಲಿ ಕೆಟ್ಟ ಭಾವನೆಯನ್ನು ಮೂಡಿಸುತ್ತದೆ ಹಾಗೂ ನಾಗರಿಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ. ಈ ಪ್ರಕರಣವು ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013’ ರಂತೆಯೂ ಅರ್ಹ ಪ್ರಕರಣವಾಗಿರುತ್ತದೆ.
ಆದ್ದರಿಂದ ಈ ಪತ್ರ ತಲುಪಿದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಪಾರದರ್ಶಕ ತನಿಖೆಗೆ ಆದೇಶಿಸಿ ಸೇವೆಯಿಂದ ಅಮಾನತ್ತು ಮಾಡಲು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಏಳು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಹಾಗೂ ಮಹಿಳೆಯರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ, ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕೆಂದು ಮಹಿಳಾ ಆಯೋಗ ಆಗ್ರಹಿಸಿದೆ.
ಇದನ್ನೂ ಓದಿ : ಪಿಯು ವಿದ್ಯಾರ್ಥಿಗಳಿಗೆ ಬಿಗ್ ಶಾಕ್ | ಸ್ಟಡಿ ಹಾಲಿಡೇಗೆ ಬ್ರೇಕ್ ಹಾಕಿದ ಶಿಕ್ಷಣ ಇಲಾಖೆ



















