ನವದೆಹಲಿ : ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಅವರನ್ನು ಪದೇ ಪದೇ ಕಡೆಗಣಿಸುತ್ತಿರುವ ಟೀಂ ಇಂಡಿಯಾ ಆಯ್ಕೆ ನೀತಿಯ ಬಗ್ಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಆಟಗಾರನ ಆತ್ಮವಿಶ್ವಾಸವನ್ನು ಕುಗ್ಗಿಸುವ ಇಂತಹ ನಡೆಗಳು ಸರಿಯಲ್ಲ,” ಎಂದು ಅವರು ಟೀಂ ಮ್ಯಾನೇಜ್‌ಮೆಂಟ್‌ಗೆ ಚಾಟಿ ಬೀಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಅರ್ಶ್‌ದೀಪ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿತ್ತು. ಕೇವಲ ಮೂರನೇ ಪಂದ್ಯಕ್ಕೆ ಅವಕಾಶ ನೀಡುವ ನಿರ್ಧಾರದ ಬಗ್ಗೆ ಅಶ್ವಿನ್ ಆಕ್ರೋಶ ಹೊರಹಾಕಿದ್ದಾರೆ. “ಆತ ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲ ಉತ್ತಮ ಪ್ರದರ್ಶನ ನೀಡಿದ್ದಾನೆ. ಆತನಿಗೆ ಸಲ್ಲಬೇಕಾದ ಸ್ಥಾನವನ್ನು ನೀಡಿ. ತಲೆ ಎತ್ತಿ ಮೈದಾನಕ್ಕೆ ಬರುವಂತಹ ವಾತಾವರಣ ನಿರ್ಮಿಸಿ,” ಎಂದು ಅಶ್ವಿನ್ ಮನವಿ ಮಾಡಿದ್ದಾರೆ.
ಆತ್ಮವಿಶ್ವಾಸ ಕುಗ್ಗಿಸುವ ನಡೆ
ಆಟಗಾರನ ದೃಷ್ಟಿಕೋನದಿಂದ ಮಾತನಾಡಿರುವ ಅಶ್ವಿನ್, “ಮೊದಲೆರಡು ಪಂದ್ಯಗಳಲ್ಲಿ ಆಡಿಸದೆ, ಈಗ ಮೂರನೇ ಪಂದ್ಯಕ್ಕೆ ಕರೆತರುವುದರಿಂದ ಏನು ಪ್ರಯೋಜನ? ಇದು ಆಟಗಾರನ ಲಯ ಮತ್ತು ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ,” ಎಂದು ಪ್ರಶ್ನಿಸಿದ್ದಾರೆ. ಬ್ಯಾಟರ್‌ಗಳಿಗೆ ಹೋಲಿಸಿದರೆ ಬೌಲರ್‌ಗಳ ಆತ್ಮವಿಶ್ವಾಸ ಹೆಚ್ಚು ನಾಜೂಕಾಗಿರುತ್ತದೆ. ನಿರಂತರ ಅವಕಾಶ ಸಿಗದಿದ್ದರೆ ಬೌಲರ್‌ಗಳು ಲಯ ಕಳೆದುಕೊಳ್ಳುತ್ತಾರೆ ಮತ್ತು ಮುಂದಿನ ಪಂದ್ಯದಲ್ಲಿ ತುಕ್ಕು ಹಿಡಿದಂತೆ ಆಡುತ್ತಾರೆ ಎಂದು ಅಶ್ವಿನ್ ವಿಶ್ಲೇಷಿಸಿದ್ದಾರೆ.
ರಾಹುಲ್ ದ್ರಾವಿಡ್ vs ಗಂಭೀರ್ ಹೋಲಿಕೆ ಬೇಡ
ಇದು ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಎಷ್ಟು ಪಂದ್ಯ ಆಡಿದ್ದರು ಅಥವಾ ಗೌತಮ್ ಗಂಭೀರ್ ಅಡಿಯಲ್ಲಿ ಎಷ್ಟು ಆಡುತ್ತಿದ್ದಾರೆ ಎಂಬ ವಿಷಯವಲ್ಲ. ಸದ್ಯ ಆಟಗಾರನ ಮನಸ್ಥಿತಿ ಏನಾಗಿರುತ್ತದೆ ಎಂಬುದೇ ಮುಖ್ಯ ಎಂದು ಅಶ್ವಿನ್ ಹೇಳಿದ್ದಾರೆ. “ನಾನು ಕೂಡ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಉತ್ತಮ ಪ್ರದರ್ಶನ ನೀಡಿದ ಮೇಲೂ ಸ್ಥಾನಕ್ಕಾಗಿ ಹೋರಾಡುವುದು ಅನ್ಯಾಯ,” ಎಂದು ಅಶ್ವಿನ್ ನೊಂದು ನುಡಿದಿದ್ದಾರೆ.
ಸತತವಾಗಿ ವಿಕೆಟ್ ಪಡೆಯುವ ಮತ್ತು ತಂಡಕ್ಕೆ ಆಸರೆಯಾಗುವ ಅರ್ಶ್‌ದೀಪ್ ಅವರಂತಹ ಬೌಲರ್‌ಗೆ ಆಡುವ ಬಳಗದಲ್ಲಿ ಭದ್ರತೆ ಒದಗಿಸುವುದು ಅತ್ಯಗತ್ಯ. ಅನಿಶ್ಚಿತತೆ ಸೃಷ್ಟಿಸುವುದರಿಂದ ಬೌಲರ್ ಸ್ವಯಂ-ಅನುಮಾನದ ಸುಳಿಗೆ ಸಿಲುಕುತ್ತಾನೆ ಎಂಬುದು ಅಶ್ವಿನ್ ಅವರ ವಾದವಾಗಿದೆ. ಅವರ ಈ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ‘ರೊಟೇಷನ್ ಪಾಲಿಸಿ’ ಮತ್ತು ‘ವರ್ಕ್ ಲೋಡ್ ಮ್ಯಾನೇಜ್ಮೆಂಟ್’ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ ಸಂಭ್ರಮ | ಕೆಎಸ್‌ಸಿಎಗೆ ಗೃಹ ಇಲಾಖೆಯಿಂದ ಗ್ರೀನ್ ಸಿಗ್ನಲ್



















