ಮುಂಬೈ: ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶವು ಠಾಕ್ರೆ ಕುಟುಂಬದ ಸುಮಾರು 25 ವರ್ಷಗಳ ಅಧಿಪತ್ಯಕ್ಕೆ ಅಂತ್ಯ ಹಾಡಿದೆ. ಏಷ್ಯಾದ ಅತ್ಯಂತ ಶ್ರೀಮಂತ ಪಾಲಿಕೆ ಎಂದೇ ಖ್ಯಾತಿಯಾಗಿರುವ ಬಿಎಂಸಿಯಲ್ಲಿ ಅಧಿಕಾರವನ್ನು ಕಳೆದುಕೊಂಡರೂ, ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರು ತಮ್ಮ ಮರಾಠಿ ಅಸ್ಮಿತೆಯ ರಾಜಕಾರಣವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. “ಹೋರಾಟ ಇಲ್ಲಿಗೆ ಮುಗಿದಿಲ್ಲ” ಎಂದು ಹೇಳುವ ಮೂಲಕ ಮುಂಬರುವ ದಿನಗಳಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಗೆ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿದ್ದಾರೆ.
ಮರಾಠಿ ಜನರಿಗಾಗಿ ಹೋರಾಟ ಮುಂದುವರಿಸುತ್ತೇವೆ: ಉದ್ಧವ್ ಠಾಕ್ರೆ ಬಣ
ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋವನ್ನು ಹಂಚಿಕೊಂಡಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(ಯುಬಿಟಿ), ಮರಾಠಿ ಜನರಿಗೆ ಸಲ್ಲಬೇಕಾದ ಗೌರವ ಸಿಗುವವರೆಗೂ ತಮ್ಮ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದೆ. ಈ ಬಾರಿಯ ಚುನಾವಣೆಯಲ್ಲಿ 227 ವಾರ್ಡ್‌ಗಳ ಪೈಕಿ ಉದ್ಧವ್ ಬಣವು 65 ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಆಡಳಿತಾರೂಢ ಬಿಜೆಪಿಯ ಅಬ್ಬರದ ನಡುವೆಯೂ ಮರಾಠಿ ಮತದಾರರನ್ನು ಸೆಳೆಯಲು ಮುಂದಾಗಿರುವ ಉದ್ಧವ್ ಠಾಕ್ರೆ, ಮುಂದಿನ ದಿನಗಳಲ್ಲಿ ಮರಾಠಿ ಅಸ್ಮಿತೆಯನ್ನೇ ಪ್ರಧಾನ ಅಸ್ತ್ರವನ್ನಾಗಿ ಬಳಸಲು ನಿರ್ಧರಿಸಿದ್ದಾರೆ.
ಅಧಿಕಾರದಲ್ಲಿರುವವರನ್ನು ಮಂಡಿಯೂರಿಸುತ್ತೇವೆ: ರಾಜ್ ಠಾಕ್ರೆ ಗುಡುಗು
ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಮುಖ್ಯಸ್ಥ ರಾಜ್ ಠಾಕ್ರೆ ಅವರು ತಮ್ಮ ಎಂದಿನ ಶೈಲಿಯಲ್ಲಿಯೇ ಆಡಳಿತಾರೂಢ ಮೈತ್ರಿಕೂಟಕ್ಕೆ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಸೋಲಿನಿಂದ ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಅವರು, ಮರಾಠಿ ಜನರ ವಿರುದ್ಧ ಯಾವುದೇ ಅನ್ಯಾಯ ನಡೆದರೆ ತಮ್ಮ ಪಕ್ಷದ ಕಾರ್ಪೊರೇಟರ್‌ಗಳು ಅಧಿಕಾರದಲ್ಲಿರುವವರನ್ನು ಮಂಡಿಯೂರಿಸುವಂತೆ ಮಾಡಲಿದ್ದಾರೆ ಎಂದು ಗುಡುಗಿದ್ದಾರೆ. ಕೇವಲ ಆರು ಸ್ಥಾನಗಳನ್ನು ಗೆದ್ದಿದ್ದರೂ, ಮರಾಠಿ ಭಾಷೆ, ಸಂಸ್ಕೃತಿ ಮತ್ತು ಸಮೃದ್ಧ ಮಹಾರಾಷ್ಟ್ರಕ್ಕಾಗಿ ತಮ್ಮ ಸುದೀರ್ಘ ಹೋರಾಟ ಮುಂದುವರಿಯಲಿದೆ ಎಂದು ಅವರು ತಮ್ಮ ಮುಕ್ತ ಪತ್ರದಲ್ಲಿ ತಿಳಿಸಿದ್ದಾರೆ.
ಮಹಾಯುತಿ ಮೈತ್ರಿಗೆ ಅಭೂತಪೂರ್ವ ಯಶಸ್ಸು
ಈ ಬಾರಿಯ ಚುನಾವಣೆಯಲ್ಲಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿಯನ್ನು ಒಳಗೊಂಡ ಮಹಾಯುತಿ ಮೈತ್ರಿಕೂಟವು ಸ್ಪಷ್ಟ ಬಹುಮತ ಗಳಿಸಿದೆ. ಒಟ್ಟು 227 ವಾರ್ಡ್‌ಗಳ ಪೈಕಿ 118 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಮ್ಯಾಜಿಕ್ ನಂಬರ್ 114 ಅನ್ನು ದಾಟಿದೆ. ಇದರಲ್ಲಿ ಬಿಜೆಪಿ 89 ಮತ್ತು ಏಕನಾಥ್ ಶಿಂದೆ ಬಣ 29 ಸ್ಥಾನಗಳನ್ನು ಗೆದ್ದುಕೊಂಡಿವೆ. ಮಹಾರಾಷ್ಟ್ರದಾದ್ಯಂತ ನಡೆದ 29 ಪೌರ ಸಂಸ್ಥೆಗಳ ಚುನಾವಣೆಯಲ್ಲಿ 25 ಕಡೆಗಳಲ್ಲಿ ಮಹಾಯುತಿ ಅಧಿಕಾರಕ್ಕೆ ಬರುವ ಮೂಲಕ ರಾಜ್ಯ ರಾಜಕಾರಣದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಇದನ್ನೂ ಓದಿ: ಗೋವಾದಲ್ಲಿ ರಷ್ಯನ್ ಪ್ರಜೆಯಿಂದ ಇಬ್ಬರು ಮಹಿಳೆಯರ ಭೀಕರ ಕೊಲೆ | ಬೆಚ್ಚಿಬಿದ್ದ ಪ್ರವಾಸಿ ತಾಣ



















