ಮೈಸೂರು: ಶಿಡ್ಲಘಟ್ಟದಲ್ಲಿ ಮಹಿಳಾ ಪೌರಾಯುಕ್ತೆ ಮೇಲೆ ಕಾಂಗ್ರೆಸ್ ಮುಖಂಡನೊಬ್ಬ ಧಮ್ಕಿ ಹಾಕಿ ಬೆದರಿಸಿದ ಘಟನೆ ಮಾಸುವ ಮುನ್ನವೇ ಸಿಎಂ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿ ಕೊಲೆ ಬೆದರಿಕೆ ಹಾಕಲಾಗಿದೆ. ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕಾದ ಜಮೀನು ಪರಿಶೀಲನೆ ಮಾಡಲು ತೆರಳಿದ ಗ್ರಾಮ ಆಡಳಿತ ಮಹಿಳಾ ಅಧಿಕಾರಿ ಹಾಗೂ ಗ್ರಾಮ ಸಹಾಯಕನಿಗೆ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಗ್ರಾಮ ಆಡಳಿತಾಧಿಕಾರಿ ಬಂಡೀಪಾಳ್ಯ ವೃತ್ತದ ಜಿ.ಭವ್ಯ, ಗ್ರಾಮ ಸಹಾಯಕ ನವೀನ್ ಕುಮಾರ್ ಅವರನ್ನು ನಿಂದಿಸಲಾಗಿದೆ. ಮೈಸೂರು ತಾಲ್ಲೂಕು ಗುಡಮಾದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಎಂ ಪುಟ್ಟಸ್ವಾಮಿ ಎಂಬಾತ ಬೆದರಿಕೆ ಹಾಕಿದ ಆರೋಪಿ
ಧಮ್ಕಿ ಹಾಕಿ ಕೊಲೆ ಬೆದರಿಕೆ ಹಾಕಿದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಈ ವೇಳೆ ಪುಟ್ಟಸ್ವಾಮಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿದ್ದಾನೆ. ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣ ಮಾಡಲು ಸರ್ವೆ ನಂ.8 ರಲ್ಲಿ 5 ಎಕ್ರೆ 05 ಗುಂಟೆ,ಸರ್ವೆ ನಂ.60 ರಲ್ಲಿ 6 ಎಕ್ರೆ 10 ಗುಂಟೆ ಹಾಗೂ ಸರ್ವೆ ನಂ.68 ರಲ್ಲಿ 8 ಎಕ್ರೆ 25 ಗುಂಟೆ ಒಟ್ಟು 20 ಎಕ್ರೆ ಜಾಗ ಮೀಸಲಿಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದೆ. ತಮ್ಮ ಸ್ವಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಆಸಕ್ತಿ ತೋರಿದ್ದಾರೆ.
ಈ ಹಿನ್ನೆಲೆ ಜಾಗ ಗುರುತಿಸಿ ಸ್ವಾಧೀನ ಪ್ರಕ್ರಿಯೆಗೆ ಆದೇಶಿಸಿ ಜಮೀನು ಪರಿಶೀಲನೆಗೆ ಮಹಿಳಾ ಅಧಿಕಾರಿ ಜಿ.ಭವ್ಯ ಹಾಗೂ ನವೀನ್ ಕುಮಾರ್ ತೆರಳಿದ್ದರು. ಈ ವೇಳೆ ಸದರಿ ಜಮೀನಿನಲ್ಲಿ ಅನಧಿಕೃತವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದ ಪುಟ್ಟಸ್ವಾಮಿ, ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಸೀಲ್ದಾರ್ ತಲೆ ತೆಗೆಯಬೇಕು, ನಿನ್ನನ್ನ ಇಲ್ಲಿಯೇ ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಪುಟ್ಟಸ್ವಾಮಿಯ ದೌರ್ಜನ್ಯ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಗ್ರಾಮ ಸಹಾಯಕ ನವೀನ್ ಕುಮಾರ್‌ಗೂ ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿಸಿದ್ದಾನೆ.
ಸರ್ಕಾರಿ ಕೆಲಸವನ್ನ ನಿರ್ಭಯವಾಗಿ ನಿರ್ವಹಿಸಲು ಮಹಿಳಾ ಸಿಬ್ಬಂದಿಯಾದ ನನಗೆ ಭಯದ ವಾತಾವರಣ ಉಂಟು ಮಾಡಿರುವ ಪುಟ್ಟಸ್ವಾಮಿ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಭವ್ಯ ರವರು ಪ್ರಕರಣ ದಾಖಲಿಸಿ, ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೆ ಶಿಡ್ಲಘಟ್ಟದಲ್ಲಿ ಮಹಿಳಾ ಪೌರಾಯುಕ್ತೆ ಮೇಲೆ ಕಾಂಗ್ರೆಸ್ ಮುಖಂಡನೊಬ್ಬ ಧಮ್ಕಿ ಹಾಕಿ ಬೆದರಿಸಿದ ಘಟನೆ ಮಾಸುವ ಮುನ್ನವೇ ಸಿಎಂ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿ ವಿರುದ್ದ ಕೊಲೆ ಬೆದರಿಕೆ ಬಂದಿದೆ. ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಪಡಿಸುವ ವ್ಯಕ್ತಿಗಳಿಂದ ಅಧಿಕಾರಿಗಳಿಗೆ ರಕ್ಷಣೆ ಬೇಕಿದೆ. ಸಿಎಂ ಪ್ರತಿನಿಧಿಸುವ ಕ್ಷೇತ್ರದಲ್ಲೇ ಇಂತಹ ಘಟನೆ ನಡೆದರೆ ಉಳಿದ ಕ್ಷೇತ್ರಗಳ ಗತಿ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಡಿಸಿಎಂ ಡಿಕೆಶಿ ದಾವೊಸ್ ಪ್ರವಾಸ ದಿಢೀರ್ ರದ್ದು!



















