ವರ್ಷದ ಮೊದಲ ಹಬ್ಬ ‘ಮಕರ ಸಂಕ್ರಾಂತಿ‘ಯನ್ನು ರಾಜ್ಯದೆಲ್ಲೆಡೆ ವಿಜೃಂಭಣೆಯಿಂದ ಮಾಡುತ್ತಿದ್ದಾರೆ. ಎತ್ತ ತಿರುಗಿದರು ಸಂಭ್ರಮದ ವಾತವರಣ ಮನೆ ಮಾಡಿದೆ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು ಅರಶಿನ ಕುಂಕುಮ ಇಟ್ಟುಕೊಂಡು ಪ್ರೀತಿ ಪಾತ್ರರಿಗೆ ಎಳ್ಳು ಬೆಲ್ಲವನ್ನು ಜೊತೆಗೆ ಪ್ರೀತಿಯನ್ನು ಹಂಚಲಾಗುತ್ತದೆ.

ಮಕರ ಸಂಕ್ರಾಂತಿಯ ಇತಿಹಾಸವು ಸುಮಾರು 2,000 ವರ್ಷಗಳ ಹಿಂದಿನ ವೈದಿಕ ಕಾಲಕ್ಕೆ ಹೋಗುತ್ತದೆ. ಅಂದಿನ ಕೃಷಿ ಪ್ರಧಾನ ಸಮಾಜವು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದನ್ನು ದಕ್ಷಿಣಾಯಣದ ಅಂತ್ಯ ಮತ್ತು ಉತ್ತರಾಯಣದ ಆರಂಭವೆಂದು ಗುರುತಿಸಿತು. ಋಗ್ವೇದದಲ್ಲಿ ಸೂರ್ಯದೇವನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಗಾಯತ್ರಿ ಮಂತ್ರವು ಸೂರ್ಯನ ಶಕ್ತಿಯನ್ನು ಹೇಳುತ್ತೆ. ಮಹಾಭಾರತದ ಕಾಲದಲ್ಲೂ ಈ ದಿನಕ್ಕೆ ವಿಶೇಷ ಪವಿತ್ರತೆ ಇತ್ತು; ಭೀಷ್ಮ ಪಿತಾಮಹರು ತಮ್ಮ ಪ್ರಾಣತ್ಯಾಗಕ್ಕೆ ಇದೇ ಪವಿತ್ರ ಉತ್ತರಾಯಣದ ಕಾಲವನ್ನು ಆರಿಸಿಕೊಂಡಿದ್ದರು ಎನ್ನುವುದು ಈ ದಿನದ ಮಹತ್ವಕ್ಕೆ ಸಾಕ್ಷಿ.
ಹಬ್ಬದ ಮಹತ್ವ

ಈ ಹಬ್ಬವು ಪ್ರಕೃತಿ ಮತ್ತು ರೈತರಿಗೆ ಸಲ್ಲಿಸುವ ಕೃತಜ್ಞತೆಯ ಸಂಕೇತ. ಇದು ಹೊಸ ಆರಂಭಗಳ ಕಾಲವಾಗಿದ್ದು, ಮದುವೆ, ಹೊಸ ಉದ್ಯಮ ಅಥವಾ ಯಾವುದೇ ಶುಭ ಕಾರ್ಯಗಳಿಗೆ ಉತ್ತರಾಯಣವು ಅತ್ಯಂತ ಪ್ರಶಸ್ತವಾಗಿದೆ. ಧಾರ್ಮಿಕವಾಗಿ, ಸೂರ್ಯನ ಆರಾಧನೆಯು ಉತ್ತಮ ಆರೋಗ್ಯ ಮತ್ತು ಚೈತನ್ಯವನ್ನು ನೀಡುತ್ತದೆ ಎಂದು ನಂಬಲಾಗಿದೆ. ಗಂಗಾ ಸ್ನಾನದಂತಹ ಪುಣ್ಯಸ್ನಾನಗಳು ಪಾಪವನ್ನು ತೊಳೆದು ಪುನೀತಗೊಳಿಸುತ್ತವೆ ಎಂಬ ನಂಬಿಕೆಯಿದೆ. ಇನ್ನು, “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ” ಎಂಬ ಸಂದೇಶದೊಂದಿಗೆ ಎಳ್ಳು-ಬೆಲ್ಲ ಹಂಚುವುದು ಜನರಲ್ಲಿ ಸಾಮರಸ್ಯ ಮತ್ತು ಪ್ರೀತಿಯನ್ನು ಬೆಳೆಸುತ್ತದೆ. ಆಯುರ್ವೇದದ ಪ್ರಕಾರ, ಈ ಹವಾಮಾನ ಬದಲಾವಣೆಯ ಸಮಯದಲ್ಲಿ ಎಳ್ಳು ಮತ್ತು ಬೆಲ್ಲದ ಸೇವನೆಯು ದೇಹಕ್ಕೆ ಅಗತ್ಯವಾದ ಉಷ್ಣತೆ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.
ಪುರಾಣಗಳ ಪ್ರಕಾರ, ಈ ಹಬ್ಬದ ಹಿಂದೆ ಒಂದು ಸುಂದರವಾದ ಕಥೆಯಿದೆ. ಸೂರ್ಯದೇವ ಮತ್ತು ಆತನ ಮಗನಾದ ಶನಿದೇವನ ನಡುವೆ ಮನಸ್ತಾಪವಿತ್ತು. ಇದರಿಂದಾಗಿ ಸೂರ್ಯನು ದಕ್ಷಿಣ ಪಥದಲ್ಲಿದ್ದಾಗ ಭೂಮಿಯ ಮೇಲೆ ಬರಗಾಲ ಮತ್ತು ಕತ್ತಲೆ ಆವರಿಸಿತ್ತು. ಆಗ ಬ್ರಹ್ಮಾಂಡದ ರಕ್ಷಕ ದೇವತೆಗಳು ಸೂರ್ಯನನ್ನು ಪ್ರಾರ್ಥಿಸಿ, ಶನಿಯ ಕ್ಷೇತ್ರವಾದ ಮಕರ ರಾಶಿಯನ್ನು ಪ್ರವೇಶಿಸುವಂತೆ ವಿನಂತಿಸಿದರು.

ಸಂಕಲಾಸುರನಂತಹ ರಾಕ್ಷಸರು ಈ ಪಥವನ್ನು ತಡೆದಾಗ, ವಿಷ್ಣುವಿನ ತೇಜಸ್ಸಿನಿಂದ ಜನಿಸಿದ ದೇವತೆಯು ಆ ರಾಕ್ಷಸರನ್ನು ಸಂಹರಿಸಿ ದಾರಿಯನ್ನು ಸುಗಮಗೊಳಿಸಿದಳು. ಸೂರ್ಯನು ತನ್ನ ಮಗನಾದ ಶನಿಯ ಮನೆಗೆ ಭೇಟಿ ನೀಡಿದ ಈ ದಿನವೇ ಮಕರ ಸಂಕ್ರಾಂತಿ. ಈ ತಂದೆ-ಮಗನ ಮಿಲನವು ಭೂಮಿಯ ಮೇಲೆ ಶಾಂತಿ ಮತ್ತು ಸಮೃದ್ಧಿಯನ್ನು ತಂದಿತು. ಇದೇ ದಿನ ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಭೂಮಿಗೆ ಇಳಿದು ಬಂದಳು ಎಂಬ ಕಥೆಯೂ ಇದೆ.
ಇದನ್ನೂ ಓದಿ : ರಾಜ್ಯಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ | ಕೆ.ಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು.. ಹೂ-ಹಣ್ಣುಗಳ ಬೆಲೆ ಗಗನಕ್ಕೆ!



















