ಬೆಂಗಳೂರು | ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಬುಧವಾರಕ್ಕೆ (ಜ.14) ಆದೇಶ ಕಾಯ್ದಿರಿಸಿತ್ತು. ಅದರಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶವನ್ನು ಪ್ರಕಟಿಸಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ನ್ಯಾಯಾಲಯವು ಜಾಮೀನು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಿದೆ. ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಮತ್ತು ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಮಾಡಬಾರದು ಎಂದು ಸೂಚಿಸಿದೆ. ಸಿಬಿಐ ಅಧಿಕಾರಿಗಳು ನಾಗೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಲು ಈಗಲೂ ಸ್ವತಂತ್ರರಾಗಿದ್ದರೂ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರನ್ನ ತಾತ್ಕಲಿಕವಾಗಿ ಮತ್ತು ತಕ್ಷಣ ಬಂಧಿಸುವಂತಿಲ್ಲ. ಇದರಿಂದ ಅವರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.
ಇದನ್ನೂ ಓದಿ : ಶಬರಿಮಲೆಯಲ್ಲಿ ‘ಮಕರ ಜ್ಯೋತಿ’ ದರ್ಶನ | ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ಲಕ್ಷಾಂತರ ಅಯ್ಯಪ್ಪ ಭಕ್ತರು!



















