ತಿರುವನಂತಪುರಂ : ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ಜ್ಯೋತಿ ರೂಪದಲ್ಲಿ ಭಕ್ತರಿಗೆ ಅಯ್ಯಪ್ಪನ ದರ್ಶನವಾಗಿದ್ದು, ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಉದ್ಭವಿಸುವ ಮಕರ ಜ್ಯೋತಿಯನ್ನ (ಮಕರವಿಳಕ್ಕು) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಐತಿಹಾಸಿಕ ಶಬರಿಮಲೆ ದೇಗುಲದಲ್ಲಿ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ನೆರೆದಿತ್ತು. ಸಂಜೆ 6:43 ರಿಂದ 6:46ರ ಸುಮಾರಿಗೆ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು. ಈ ವೇಳೆ ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಭಕ್ತರು ಜ್ಯೋತಿ ಕಣ್ತುಂಬಿಕೊಂಡಿದ್ದಾರೆ.
ಶಬರಿಮಲೆ ಅಯ್ಯಪ್ಪನ ದೇಗುಲದಲ್ಲಿ ಬುಧವಾರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ಆಯೋಜನೆಗೊಂಡಿದ್ದವು. ಪಂದಳ ರಾಜಮನೆತನದಿಂದ ಆಭರಣಗಳನ್ನ ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ವೇಳೆಗೆ ಮಳೆಯ ಭೀತಿಯ ನಡುವೆಯೂ ಜ್ಯೋತಿ ರೂಪದಲ್ಲಿ ಅಯ್ಯಪ್ಪನ ದರ್ಶನವಾಯಿತು.
ಇದನ್ನೂ ಓದಿ : ಶಿವಮೊಗ್ಗ | ಇರುಮುಡಿ ಹೊತ್ತು ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ಶಿವಣ್ಣ ದಂಪತಿ



















