ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 112 ಜನರ ವಿರುದ್ಧ ದಾಖಲಾಗಿದ್ದ ‘ಕೊಲೆ ಯತ್ನ’ ಪ್ರಕರಣವೊಂದು ಇದೀಗ ದಾರಿ ತಪ್ಪಿದೆ. ಈ ಪ್ರಕರಣದಲ್ಲಿ ದೂರು ನೀಡಿದ್ದ ‘ಸಂತ್ರಸ್ತ’ ವ್ಯಕ್ತಿಯೇ ಅಸ್ತಿತ್ವದಲ್ಲಿಲ್ಲ ಎಂದು ತನಿಖಾ ಸಂಸ್ಥೆಗಳು ಕಂಡುಕೊಂಡಿವೆ. ಹೀಗಾಗಿ ಪೊಲೀಸರು ಈ ಆರೋಪಗಳನ್ನು ಕೈಬಿಡಲು ಮುಂದಾಗಿದ್ದರೂ, ಪ್ರಕರಣವನ್ನು ಮುಂದುವರಿಸುವಂತೆ ಅವರ ಮೇಲೆ ‘ರಾಜಕೀಯ ಒತ್ತಡ’ ಹೇರಲಾಗುತ್ತಿದೆ ಎಂಬ ಗಂಭೀರ ವಿಷಯ ಬೆಳಕಿಗೆ ಬಂದಿದೆ.
ಪ್ರಸ್ತುತ ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವಿದ್ದು, ಅವಾಮಿ ಲೀಗ್ ನಾಯಕರ ವಿರುದ್ಧ ದಾಖಲಾಗುತ್ತಿರುವ ಪ್ರಕರಣಗಳು ‘ನಕಲಿ’ ಕೇಸ್‌ಗಳು (Ghost cases) ಅಥವಾ ರಾಜಕೀಯ ಪ್ರೇರಿತ ಎಂಬ ಆರೋಪಗಳಿಗೆ ಈ ಘಟನೆ ಪುಷ್ಟಿ ನೀಡಿದೆ.
2024ರಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಆಗಸ್ಟ್ 4ರಂದು ಢಾಕಾದ ಧನ್ಮಂಡಿ ಪ್ರದೇಶದಲ್ಲಿ ಶಹೀದ್ ಅಲಿ (27) ಎಂಬವರ ಮೇಲೆ ‘ಕೊಲೆ ಯತ್ನ’ ನಡೆದಿದೆ ಎಂದು ಆರೋಪಿಸಿ ಸೆಪ್ಟೆಂಬರ್ 3ರಂದು ದೂರು ದಾಖಲಾಗಿತ್ತು. ಈ ದೂರಿನಲ್ಲಿ ಶೇಖ್ ಹಸೀನಾ ಸೇರಿದಂತೆ ಅವರ ಮಗ ಸಜೀಬ್ ವಾಜೆದ್ ಜಾಯ್ ಮತ್ತು ಒಬೈದುಲ್ ಖಾದರ್ ಸೇರಿದಂತೆ ಒಟ್ಟು 113 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.
ತನಿಖೆಯಲ್ಲಿ ಬಯಲಾದ ಸತ್ಯ:
ಸ್ಥಳೀಯ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡ ಬಾಂಗ್ಲಾದೇಶದ ವಿಶೇಷ ತನಿಖಾ ಸಂಸ್ಥೆ ‘ಪೊಲೀಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್’ (PBI), ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.
ನಾಪತ್ತೆಯಾದ ಸಂತ್ರಸ್ತ: ಎಫ್‌ಐಆರ್‌ನಲ್ಲಿ ಹೆಸರಿಸಲಾದ ‘ಶಹೀದ್ ಅಲಿ’ ಎಂಬ ವ್ಯಕ್ತಿ ದೂರಿನಲ್ಲಿ ನೀಡಲಾದ ವಿಳಾಸದಲ್ಲಿ ವಾಸಿಸುತ್ತಿಲ್ಲ. ಅಷ್ಟೇ ಅಲ್ಲ, ಆ ಹೆಸರಿನ ವ್ಯಕ್ತಿಯೇ ಪತ್ತೆಯಾಗಿಲ್ಲ.
ನಕಲಿ ದಾಖಲೆಗಳು: ದೂರಿನಲ್ಲಿ ನೀಡಲಾದ ರಾಷ್ಟ್ರೀಯ ಗುರುತಿನ ಚೀಟಿ ಸಂಖ್ಯೆ ನಕಲಿಯಾಗಿದ್ದು, ಅದು ಯಾವುದೇ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿಲ್ಲ.
ದೂರುದಾರನೇ ಸುಳ್ಳು: ದೂರು ನೀಡಿದ ವ್ಯಕ್ತಿ ತಾನು ಶಹೀದ್ ಅಲಿ ಅವರ ಸಹೋದರ ಎಂದು ಹೇಳಿಕೊಂಡಿದ್ದ. ಆದರೆ ತನಿಖೆಯಲ್ಲಿ ಆತ ನೀಡಿದ ವಿಳಾಸ, ಹೆಸರು ಎಲ್ಲವೂ ಸುಳ್ಳು ಎಂಬುದು ಸಾಬೀತಾಗಿದೆ. ವಿಚಾರಣೆಗೆ ಕರೆದಾಗ ಆತ ಯಾವುದೇ ವೈದ್ಯಕೀಯ ದಾಖಲೆಗಳನ್ನಾಗಲಿ ಅಥವಾ ಸಂತ್ರಸ್ತನನ್ನಾಗಲಿ ಹಾಜರುಪಡಿಸಲು ವಿಫಲನಾಗಿದ್ದಾನೆ.
ಒತ್ತಡ ತಂತ್ರ:
ಪಿಬಿಐ ಸಂಸ್ಥೆಯು ಈ ಪ್ರಕರಣದಲ್ಲಿ “ವಾಸ್ತವಿಕ ದೋಷಗಳಿವೆ” ಮತ್ತು ಇದು “ಮೂಲಭೂತವಾಗಿ ವಿಶ್ವಾಸಾರ್ಹವಲ್ಲ” ಎಂದು ಹೇಳಿ ಆರೋಪಗಳನ್ನು ಕೈಬಿಡಲು ಶಿಫಾರಸು ಮಾಡಿದೆ. ಆದರೆ, ಹಸೀನಾ ಮತ್ತು ಇತರರನ್ನು ದೋಷಮುಕ್ತಗೊಳಿಸುವಂತಹ ವರದಿಯನ್ನು ಸಲ್ಲಿಸದಂತೆ ತಮ್ಮ ಮೇಲೆ ತೀವ್ರ “ಒತ್ತಡ” ಇದೆ ಎಂದು ಪಿಬಿಐ ಒಪ್ಪಿಕೊಂಡಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.
ಯೂನುಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಸೀನಾ ವಿರುದ್ಧ ಸುಮಾರು 225ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 130ಕ್ಕೂ ಹೆಚ್ಚು ಕೊಲೆ ಪ್ರಕರಣಗಳಿವೆ. ಈ ಘಟನೆಯು ಬಾಂಗ್ಲಾದೇಶದಲ್ಲಿ ಕಾನೂನು ವ್ಯವಸ್ಥೆಯನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಲಾಗುತ್ತಿದೆ ಎಂಬ ಆತಂಕವನ್ನು ಸೃಷ್ಟಿಸಿದೆ.
ಇದನ್ನೂ ಓದಿ : ಥೈಲ್ಯಾಂಡ್‌ನಲ್ಲಿ ಭೀಕರ ರೈಲು ದುರಂತ : ಚಲಿಸುತ್ತಿದ್ದ ರೈಲಿನ ಮೇಲೆ ಕುಸಿದ ಕ್ರೇನ್‌ಗೆ 22 ಬಲಿ



















