ಬೆಂಗಳೂರು : ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಆಗಿರುವ ‘ನಂದಿನಿ’, ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಐಪಿಎಲ್‌ನಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಾಯೋಜಕತ್ವ ವಹಿಸಲು ಕರ್ನಾಟಕ ಹಾಲು ಒಕ್ಕೂಟ (KMF) ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ.
ಕಳೆದ ಐಪಿಎಲ್ ಋತುವಿನಲ್ಲಿ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ‘ಅಮೂಲ್’ ಆರ್‌ಸಿಬಿಯ ಪ್ರಾಯೋಜಕತ್ವ ವಹಿಸಿತ್ತು. ಆದರೆ ಈ ಬಾರಿ ತವರಿನ ತಂಡಕ್ಕೆ ತವರಿನದೇ ಬ್ರ್ಯಾಂಡ್ ಆದ ನಂದಿನಿಯನ್ನು ಜೋಡಿಸಲು ಕೆಎಂಎಫ್ ಸಜ್ಜಾಗಿದೆ. ಈ ಬಗ್ಗೆ RCB ಜೊತೆಗೆ KMF ಕೊನೆಯ ಹಂತದ ಮಾತುಕತೆಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳು ಹಾಗೂ ಪ್ರೊ ಕಬಡ್ಡಿ ಲೀಗ್‌ಗೂ ಪ್ರಾಯೋಜಕತ್ವ ನೀಡಿರುವ ಕೆಎಂಎಫ್, ಇದೀಗ ಐಪಿಎಲ್ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ.
ಈ ಕುರಿತು ಮಾತನಾಡಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ, “ಕರ್ನಾಟಕವನ್ನು ಪ್ರತಿನಿಧಿಸುವ ಆರ್‌ಸಿಬಿ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಜಾಗತಿಕ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ತಂಡದ ಪ್ರಮುಖ ಮುಖವಾಗಿದ್ದಾರೆ. ಕೊಹ್ಲಿ ಹಾಗೂ ತಂಡದ ಇತರೆ ಇಬ್ಬರು ಆಟಗಾರರನ್ನು ಬಳಸಿಕೊಂಡು ನಂದಿನಿ ಬ್ರ್ಯಾಂಡ್ ಪ್ರಚಾರ ಮಾಡಲು ನಾವು ಉದ್ದೇಶಿಸಿದ್ದೇವೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ, ದಿಲ್ಲಿ, ಮುಂಬೈ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿಯೂ ನಂದಿನಿ ಮಾರುಕಟ್ಟೆ ವಿಸ್ತರಿಸಲು ನೆರವಾಗಲಿದೆ,” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇಸ್ರೋಗೆ ಮತ್ತೊಂದು ಆಘಾತ | ಪಥ ಬದಲಿಸಿದ ಪಿಎಸ್‌ಎಲ್‌ವಿ-ಸಿ62 ; ಅನ್ವೇಷಾ ಸೇರಿ 16 ಉಪಗ್ರಹಗಳು ಕಕ್ಷೆ ಸೇರುವಲ್ಲಿ ವಿಫಲ



















