ಬೆಂಗಳೂರು: ಕೇಂದ್ರ ಸರ್ಕಾರವು ದೇಶದ ಸಣ್ಣ ರೈತರಿಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ಸಹಾಯಧನ ನೀಡುತ್ತದೆ. ವರ್ಷದಲ್ಲಿ ತಲಾ 2 ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈಗ ರೈತರು 22ನೇ ಕಂತಿನ (PM Kisan 22nd instalment) 2 ಸಾವಿರ ರೂಪಾಯಿ ಜಮೆಯಾಗಲು ಕಾಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಈಗ ರೈತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಫಾರ್ಮರ್ ಐಡಿ (Farmer ID) ಸಂಖ್ಯೆಯನ್ನು ಕಡ್ಡಾಯಗೊಳಿಸಿದೆ.
ಹೌದು, ರೈತರು ಈಗ ಪಿಎಂ ಕಿಸಾನ್ ಯೋಜನೆಯ 2 ಸಾವಿರ ರೂಪಾಯಿ ಪಡೆಯಲು ಫಾರ್ಮರ್ ಐಡಿಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಕರ್ನಾಟಕದ ರೈತರು fruits.karnataka.gov.in ಗೆ ಭೇಟಿ ನೀಡುವ ಮೂಲಕ ಫಾರ್ಮರ್ ಐಡಿಯನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲ, pmkisan.gov.in ಪೋರ್ಟಲ್ ಗೆ ತೆರಳಿ, ಇ-ಆಧಾರ್ ಮಾಹಿತಿಯನ್ನು ಒದಗಿಸುವ ಮೂಲಕವೂ ಫಾರ್ಮರ್ ಐಡಿ ಪಡೆಯಬಹುದಾಗಿದೆ.
ರೈತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇ-ಕೆವೈಸಿ ಆಗದಿದ್ದರೆ ಯೋಜನೆಯ ಹಣ ಲಭಿಸುವುದಿಲ್ಲ. ಹಾಗೆಯೇ, ಆಧಾರ್ ಕಾರ್ಡ್ ಮಾಹಿತಿ, ಹೆಸರು ಬದಲಾವಣೆ ಸೇರಿ ಹಲವು ಕಾರಣಗಳಿಂದಲೂ ರೈತರು ಯೋಜನೆಯ ಲಾಭ ಪಡೆಯಲು ಆಗುವುದಿಲ್ಲ. ಹಾಗಾಗಿ, ಸರಿಯಾದ ದಾಖಲೆ ನೀಡುವುದು ಪ್ರಮುಖವಾಗಿದೆ.
ಕೇಂದ್ರ ಸರ್ಕಾರವು 2019ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ಕಂತಿನಲ್ಲೂ ದೇಶದ 9 ಕೋಟಿ ರೈತರಿಗೆ 18 ಸಾವಿರ ಕೋಟಿ ರೂಪಾಯಿ ಜಮೆ ಮಾಡಲಾಗುತ್ತಿದೆ. ಯೋಜನೆ ಜಾರಿಯಾದಾಗಿನಿಂದ ಇದುವರೆಗೆ ಸರ್ಕಾರವು 3.7 ಲಕ್ಷ ಕೋಟಿ ರೂಪಾಯಿ ನೀಡಿದೆ.
ಇದನ್ನೂ ಓದಿ; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ 30 ಹುದ್ದೆಗಳ ನೇಮಕಾತಿ : 1.77 ಲಕ್ಷ ರೂ. ಸಂಬಳ



















