ಬೆಂಗಳೂರು: ಇದೇನಿದ್ದರೂ ಆನ್‌ಲೈನ್ ವಂಚನೆಗಳ ಕಾಲ. ಷೇರು ಮಾರುಕಟ್ಟೆಯಲ್ಲಿ ಹಣ ಡಬಲ್ ಮಾಡಿಕೊಡುತ್ತೇವೆ, ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ ಎಂಬುದು ಸೇರಿ ಹಲವು ರೀತಿಯಲ್ಲಿ ಸೈಬರ್ ವಂಚಕರು ಜನರ ಕೋಟ್ಯಂತರ ರೂಪಾಯಿಯನ್ನು ವಂಚಿಸುತ್ತಿದ್ದಾರೆ. ಅದರಲ್ಲೂ, ಅಕ್ಷರಸ್ಥರೇ ಇಂತಹ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಹೀಗೆ, ಗ್ರಾಹಕರು ಆನ್‌ಲೈನ್ ವಂಚನೆ ಜಾಲಕ್ಕೆ ಸಿಲುಕಬಾರದು ಎಂದು ಎಂದು ಆಕ್ಸಿಸ್ ಬ್ಯಾಂಕ್ ಈಗ ಹೊಸ ಸೆಕ್ಯುರಿಟಿ ಫೀಚರ್ ಆರಂಭಿಸಿದೆ.
ಹೌದು, ಆ್ಯಕ್ಸಿಸ್ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಆಗಿರುವ “ಓಪನ್”ನಲ್ಲಿ ಸೇಫ್ಟಿ ಸೆಂಟರ್ ಎಂಬ ಹೊಸ ಫೀಚರ್ ಅನ್ನು ಆ್ಯಕ್ಸಿಸ್ ಬ್ಯಾಂಕ್ ಪರಿಚಯಿಸಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಗ್ರಾಹಕರು ಆನ್ ಲೈನ್ ವಂಚನೆಯಿಂದ ಪಾರಾಗಬಹುದು ಎಂದು ಬ್ಯಾಂಕ್ ತಿಳಿಸಿದೆ.
ಬ್ಯಾಂಕ್ ಖಾತೆಯಿಂದ ಹಣ ಕಡಿತವಾದರೆ, ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಲೇ ಗ್ರಾಹಕರು ಈ ಸೇವೆ ಬಳಸಬಹುದು. ಕಸ್ಟಮರ್ ಕೇರ್ ಗೆ ಕರೆ ಮಾಡುವ ಅಥವಾ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲದೆ ಅನಧಿಕೃತ ಅಥವಾ ಅನುಮಾನಾಸ್ಪದ ಚಟುವಟಿಕೆಗಳಿಂದ ತಮ್ಮ ಖಾತೆಗಳನ್ನು ರಕ್ಷಿಸಲು ಸೇಫ್ಟಿ ಸೆಂಟರ್ ಸಹಕಾರ ನೀಡಲಿದೆ. .
ಹೊಸ ಸೇವೆಯ ಮೂಲಕ ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಯಾವುದೇ ಹಣವನ್ನು ವರ್ಗಾಯಿಸುವುದನ್ನು ತಕ್ಷಣವೇ ನಿರ್ಬಂಧಿಸಲು ಸಾಧ್ಯವಿದೆ. ಅಲ್ಲದೆ, ಆ್ಯಕ್ಸಿಸ್ ಮೊಬೈಲ್ ಅಪ್ಲಿಕೇಷನ್ ಮೂಲಕವೇ ಯುಪಿಐ ವಹಿವಾಟುಗಳನ್ನು ನಿರ್ಬಂಧಿಸಬಹುದು. ಇದರ ಜತೆಗೆ, ಯುಪಿಐ ಪಾವತಿಗೆ ಇಂತಿಷ್ಟೇ ಮಿತಿಯನ್ನು ಕೂಡ ನಿಗದಿಪಡಿಸಬಹುದಾಗಿದೆ. ಇದರಿಂದ ಗ್ರಾಹಕರು ಹೆಚ್ಚಿನ ಹಣ ಕಳೆದುಕೊಳ್ಳಲಾರರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿರುವ IIScಯಲ್ಲಿ 5 ಹುದ್ದೆಗಳ ನೇಮಕಾತಿ : 35 ಸಾವಿರ ರೂಪಾಯಿ ಸ್ಯಾಲರಿ



















