ಬೆಂಗಳೂರು : ಕೋಗಿಲು ಲೇಔಟ್ ಮನೆಗಳ ಡೆಮಾಲಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು 25 ಕುಟುಂಬಕ್ಕೆ ಗೃಹ ಭಾಗ್ಯ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಇದೀಗ ಸಕಲ ಸಿದ್ಧತೆ ಮಾಡಿಕೊಂಡಿದ್ದ ಕಾರ್ಯಕ್ರಮವು ರದ್ದಾಗಿದೆ.
ಸೂಕ್ತ ದಾಖಲೆ ಇರುವ 25 ಮನೆಗಳಿಗೆ ಇಂದು ಹಕ್ಕುಪತ್ರ ಹಂಚಿಕೆ ಆಗಬೇಕಿತ್ತು. ಜಿಲ್ಲಾಡಳಿತದಿಂದ ದೃಢೀಕರಣ ಪತ್ರದ ದಾಖಲೆ ಬಾರದ ಹಿನ್ನೆಲೆ ಈ ಕಾರ್ಯಕ್ರಮ ರದ್ದಾಗಿದೆ. ಹೀಗಾಗಿ ಮತ್ತೊಂದು ಸುತ್ತು 25 ಜನರ ದಾಖಲೆ ಪರಿಶೀಲನೆಗೆ ಜಿಲ್ಲಾಡಳಿತ ಮುಂದಾಗಿದೆ.
ಇಂದು ಸಂಜೆ 4 ಗಂಟೆಗೆ ಜಿಬಿಎ ಕೇಂದ್ರ ಕಛೇರಿಯ ಡಾ. ರಾಜಕುಮಾರ ಗಾಜಿನ ಮನೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭಾಗಿಯಾಗಲಿದ್ದರು. ಮೊದಲ ಹಂತದಲ್ಲಿ 25 ಮಂದಿಗೆ ರಾಜೀವ್ ಗಾಂಧಿ ವಸತಿ ಸಂಕೀರ್ಣದಲ್ಲಿ ಮನೆ ವಿತರಣೆ ಮಾಡಲು ಸರ್ಕಾರ ಸಿದ್ದತೆ ಮಾಡಿತ್ತು.
ಮನೆ ನೀಡಲು ಸರ್ಕಾರ ಹಾಕಿಕೊಂಡ ಮುಖ್ಯ ಮಾನದಂಡಗಳು ಯಾವುವು?
- ದಾಖಲೆಗಳು ಸಂಪೂರ್ಣ ಸ್ಪಷ್ಟವಾಗಿರಬೇಕು.
- ಅರ್ಜಿದಾರರು ಕರ್ನಾಟಕದ ಯಾವುದಾದರೂ ಒಂದು ಭಾಗದವರಾಗಿರಬೇಕು.
- ಬೇರೆ ರಾಜ್ಯದಿಂದ ಬಂದವರಿಗೆ ಅರ್ಹತೆ ಇಲ್ಲ.
- ಬೆಂಗಳೂರಿನಲ್ಲಿ ನೆಲೆಸಿರಬೇಕು ಮತ್ತು ಕೋಗಿಲೆ ಲೇಔಟ್‌ನಲ್ಲಿ ಕನಿಷ್ಠ 5 ವರ್ಷಗಳಿಂದ ವಾಸಿಸುತ್ತಿರಬೇಕು.
- ಒಂದೇ ಕುಟುಂಬದಿಂದ ಒಂದಕ್ಕಿಂತ ಹೆಚ್ಚು ಅರ್ಜಿ ಬಂದರೆ ರೇಷನ್ ಕಾರ್ಡ್ ಆಧಾರದಲ್ಲಿ ಪರಿಗಣಿಸಲಾಗುತ್ತದೆ.
- ವೋಟರ್ ಐಡಿ, ರೇಷನ್ ಕಾರ್ಡ್, ಮಕ್ಕಳ ಶಾಲಾ ದಾಖಲಾತಿ ಪತ್ರಗಳಿಗೆ ಆದ್ಯತೆ ನೀಡಲಾಗುತ್ತದೆ.
ಇದನ್ನೂ ಓದಿ : ಕೋಗಿಲು ನಿರಾಶ್ರಿತರಿಗೆ ನಾಳೆಯೇ ಹಕ್ಕು ಪತ್ರ ವಿತರಣೆ.. ಎಷ್ಟು ಜನಕ್ಕೆ? ಸರ್ಕಾರ ಪಾಲಿಸಿದ ಮಾನದಂಡ ಏನು?



















