ಹುಬ್ಬಳ್ಳಿ : ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿ, ಬಂಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ಅಮಾನುಷ ಕೃತ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಮಹಿಳೆ ಮೇಲಿನ ಪೊಲೀಸರ ದೌರ್ಜನ್ಯವನ್ನು ಪ್ರಶ್ನಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣ ಕಲ್ಲಕುಂಟ್ಲಾ ಅವರು, ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಮೇಲೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಬಿಜೆಪಿ ಕಾರ್ಯಕರ್ತೆ ಸುಜಾತ್ ಅಲಿಯಾಸ್ ವಿಜಯಲಕ್ಷ್ಮಿ ಹಂಡಿಯ ಬಂಧನದ ವೇಳೆ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ, ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರರಿಗೆ ಪತ್ರ ಬರೆದಿದ್ದು, ಈ ಪ್ರಕರಣದ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವರದಿ ನೀಡುವಂತೆ ಹಾಗೂ ಸಂಬಂಧಪಟ್ಟ ಠಾಣಾಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನಲೆ:
ಹಳೆ ವೈಷಮ್ಯದ ಹಿನ್ನಲೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ತಿಕ್ಕಾಟ ನಡೆದಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಅಧಿಕಾರಿಗಳ ಜೊತೆ ಸುಜತಾ ಹಂಡಿ ಕೂಡ ತೆರಳಿದ್ದರು. ಈ ವೇಳೆ ತಗಾದೆ ತೆಗೆದು ಗಲಾಟೆ ಮಾಡಲಾಗಿದೆ. ಈ ಹಳೆಯ ಪ್ರಕರಣವನ್ನು ಮುಂದಿಟ್ಟಕೊಂಡು ಕಾಂಗ್ರೆಸ್ ಕಾರ್ಪೋರೇಟರ್ ಹಾಗೂ ಬೆಂಬಲಿಗರು ಗಲಾಟೆ ಮಾಡಿದ್ದಾರೆ.
ಈ ಹಿನ್ನೆಲೆ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣ ಕಲ್ಲಕುಂಟ್ಲಾ ಸುಜತಾ ಹಂಡಿ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆದಾರದ ಮೇಲೆ ಬಿಜೆಪಿ ಕಾರ್ಯಕರ್ತೆ ಸುಜತಾ ಹಂಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ವೇಳೆ ಪ್ರತಿರೋಧ ತೋರಿ ಸುಜಾತ ಹಂಡಿ ಚೀರಾಟ ನಡೆಸಿದ್ದಾರೆ. ಈ ವೇಳೆ ಆಕೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತೆ ವಿರುದ್ಧ ಬಿಎನ್‌ಎಸ್ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೊದಲು ಸುಜತಾ ಹಂಡಿ ಸಹ ಕಾಂಗ್ರೆಸ್ ನಲ್ಲಿದ್ದರು. ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸುಜಾತ SIR- BLO ಗಳನ್ನು ಕರೆತಂದು ನಮ್ಮ ವೋಟ್ ಡಿಲಿಟ್ ಮಾಡಿಸಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ.
ಇದೇ ಆರೋಪದ ಮೇಲೆ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ಆಗಿತ್ತು. ಈ ವಿಚಾರ ಇಟ್ಟುಕೊಂಡು ಸುಜತಾ ಹಂಡಿ ವಿರುದ್ಧ ದೂರು ದಾಖಲಿಸಿ ಬಂಧಿಸಿದ್ದಾರೆ. ಬಂಧನದ ಸಂದರ್ಭದಲ್ಲಿ ಪೊಲೀಸರು ಸುಜಾತ ಜೊತೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಮತ್ತೊಂದು ದೂರನ್ನು ಕೇಶ್ವಾಪುರ ಪೊಲೀಸರು ದಾಖಲಿಸಿದ್ದಾರೆ.
ಇದನ್ನೂ ಓದಿ: ಶಾಸಕರ ಇನ್‌ಸ್ಟಾಗ್ರಾಮ್‌ನಿಂದ ಯುವತಿಗೆ ಮೆಸೇಜ್ | ಅಕೌಂಟ್ ಹ್ಯಾಕ್ ಆಗಿದೆ ಎಂದು ದೂರು ದಾಖಲಿಸಿದ ಸಿ.ಕೆ ರಾಮಮೂರ್ತಿ!



















