ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಮನೆಯ ಎದುರು ಬಣ್ಣ ಬಣ್ಣದ ಪಾಟಕಿಗಳನ್ನು ಸಿಡಿಸುತ್ತ, ಕುಣಿದು ಕುಪ್ಪಳಿಸುತ್ತ, ಸಂಭ್ರಮ, ಸಡಗರದಿಂದ ಹೊಸ ವರ್ಷವನ್ನು ಸ್ವಾಗತಿಸಲಾಯಿತು.
ಮೈಸೂರಿನ ಅರಮನೆ ಆವರಣ ಸೇರಿದಂತೆ ಖಾಸಗಿ ಹೋಟೆಲ್, ಕ್ಲಬ್‌ಗಳಲ್ಲಿ ನೆರೆದಿದ್ದ ಸಾರ್ವಜನಿಕರು, ರಾತ್ರಿ 11 ಗಂಟೆಯಾಗುತ್ತಿದ್ದಂತೆ ಮೈಸೂರು ನಗರದ ಹೃದಯ ಭಾಗಕ್ಕೆ ಜನ ಸಾಗರವೇ ಹರಿದು ಬಂತು. 12 ಗಂಟೆಯಾಗುತ್ತಿದ್ದಂತೆ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದ ಅರಮನೆ ಎದುರು ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಬಾನೆತ್ತರದಲ್ಲಿ ಚಿಮ್ಮಿ ಸಿಡಿದ ಪಟಾಕಿಗಳನ್ನು ಕಂಡು ಸಂತಸ ಪಟ್ಟರು. ಅರಮನೆ ಆವರಣದಲ್ಲಿ ನೆರದಿದ್ದ ಸಾವಿರಾರು ಮಂದಿ ಆಗಸದಲ್ಲಿ ಬಾಣ ಬಿರುಸುಗಳ ಪ್ರದರ್ಶನ ಕಂಡು ರೋಮಾಂಚಿತಗೊಂಡರು. ಅರಮನೆ ಆವರಣದಲ್ಲಿ ಸ್ವರ್ಗವೇ ಧರೆಗೆ ಇಳಿದಂತೆ ಭಾಸವಾಗುತ್ತಿತ್ತು. ಈ ಮಧ್ಯೆ ಮೈಸೂರು ನಗರ ಪೊಲೀಸರ ಪೊಲೀಸ್ ಬ್ಯಾಂಡ್ ಸಂಗೀತ ಕಾರ್ಯಕ್ರಮ ಆಲಿಸಿ ಪುಳಕಿತಗೊಂಡರು.

ಬಿಗಿ ಬಂದೋಬಸ್ತ್ : ಹೊಸ ವರ್ಷದ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರು ನಗರ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. 1500ಕ್ಕೂ ಹೆಚ್ಚು ಮಂದಿ ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದರು. ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಶುಭಾಶಯ ನೆಪದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಕಿರಿಕಿರಿ ಉಂಟು ಮಾಡುವ ಪುಂಡರ ಮೇಲೆ ನಿಗಾ ಇರಿಸಿದ್ದ ಪೊಲೀಸರು, ಎಲ್ಲೆಡೆ ಗಸ್ತು ನಿರತರಾಗಿದ್ದರು. ಅಲ್ಲದೇ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡದಂತೆ ಎಚ್ಚರಿಕೆ ನೀಡುತ್ತಿರುವುದು ಕಂಡು ಬಂತು.
ಇದನ್ನೂ ಓದಿ: NEW YEAR | ದೇಶದ ಪ್ರಜೆಗಳಿಗೆ ಉತ್ತಮ ಆರೋಗ್ಯ, ಸಮೃದ್ಧಿ ಸಿಗಲಿ ಎಂದು ಹಾರೈಸಿದ ಪ್ರಧಾನಿ ಮೋದಿ



















