ಬೆಂಗಳೂರು: ಹೊಸ ವರ್ಷ ಬರಮಾಡಿಕೊಳ್ಳಲು ಇನ್ನು ಎರಡು ದಿನಗಳ ಮಾತ್ರ ಬಾಕಿ ಉಳಿದಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಈ ಮಧ್ಯೆ ಪಾರ್ಟಿ ಪ್ರಿಯರಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 31 ರಾತ್ರಿ ಮತ್ತು ಜನರವರಿ 1ರ ಬೆಳಗ್ಗೆ ವಿಶೇಷ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ವರ್ಷಾಚರಣೆಯ ವೇಳೆ ಪ್ರಯಾಣಿಕರಿಗೆ ಅನುಕೂಲವಾಗಲು ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯವನ್ನು ವಿಸ್ತರಣೆ ಮಾಡಲಾಗಿದೆ.
ಕೆಲವು ಮಾರ್ಗಗಳಲ್ಲಿ ಕೊನೆಯ ರೈಲುಗಳು ಬೆಳಗಿನ ಜಾವ 3.10 ರವರೆಗೆ ಚಲಿಸುತ್ತವೆ. ಎಂಜಿ ರಸ್ತೆ ನಿಲ್ದಾಣವು ರಾತ್ರಿ 10 ರಿಂದ ಮುಚ್ಚಲಿದೆ. ಮೆಜೆಸ್ಟಿಕ್ನಲ್ಲಿ ರಾತ್ರಿ 2.45ಕ್ಕೆ ಕೊನೆಯ ರೈಲು ಇರಲಿದೆ. ಜನ ಹೆಚ್ಚು ಸೇರುವುದರಿಂದ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಕೌಂಟರ್ನಲ್ಲಿ ಟಿಕೆಟ್ ಸಿಗುವುದಿಲ್ಲ. ಈ ಸಮಯದಲ್ಲಿ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್ನಲ್ಲಿ ಕೌಂಟರ್ ಕ್ಲೋಸ್ ಆಗಲಿದ್ದು, ಕ್ಯೂ ಆರ್ ಕೋಡ್ ಬಳಸಿ ಪ್ರಯಾಣ ಮಾಡಬೇಕು ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ನೇರಳೆ ಮಾರ್ಗ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟಕ್ಕೆ ಮತ್ತು ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ಕೊನೆಯ ರೈಲುಗಳು ಕ್ರಮವಾಗಿ ಬೆಳಿಗ್ಗೆ 1.45 ಮತ್ತು ಬೆಳಿಗ್ಗೆ 2 ಗಂಟೆಗೆ ಹೊರಡುತ್ತವೆ. ಗ್ರೀನ್ ಲೈನ್‌ನಲ್ಲಿ, ಮಾದಾವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವಿನ ಕೊನೆಯ ಸೇವೆಗಳು ಎರಡೂ ದಿಕ್ಕುಗಳಲ್ಲಿ ಬೆಳಿಗ್ಗೆ 2 ಗಂಟೆಗೆ ಹೊರಡುತ್ತವೆ.
ಪಾರ್ಟಿ ಹಾಟ್ಸ್ಪಾಟ್ ಆಗಿರುವ ಎಂ.ಜಿ ರೋಡ್ನಲ್ಲಿ ಹೊಷವರ್ಷಾಚರಣೆಗೆ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದ್ದು, ಈ ಹಿನ್ನೆಲೆ ಬಿಎಂಆರ್ಸಿಎಲ್, ಡಿಸೆಂಬರ್ 31ರ ರಾತ್ರಿ ಎಂ.ಜಿ ರೋಡ್ ಮೆಟ್ರೋ ನಿಲ್ದಾಣ ಬಂದ್ ಮಾಡಲಿದೆ. ರಾತ್ರಿ 10ಗಂಟೆಯಿಂದ ಎಂಟ್ರಿ ಮತ್ತು ಎಗ್ಸಿಟ್ ಬಂದ್ ಆಗಲಿದೆ. ಆದರೆ, ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್ ಕಾರ್ಯನಿರ್ವಹಿಸುತ್ತದೆ.
ಹಳದಿ ಮಾರ್ಗದಲ್ಲಿ, ರಾತ್ರಿಯ ನಂತರ ಸೇವೆಗಳು ಆರಂಭವಾಗಲಿದ್ದು, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಕೊನೆಯ ರೈಲು ಬೆಳಗಿನ ಜಾವ 3.10 ಕ್ಕೆ ಹೊರಡಲಿದ್ದು, ಬೊಮ್ಮಸಂದ್ರದಿಂದ ಆರ್‌ವಿ ರಸ್ತೆಗೆ ಅಂತಿಮ ರೈಲು ಬೆಳಗಿನ ಜಾವ 1.30 ಕ್ಕೆ ಹೊರಡಲಿದೆ.
ಪ್ರಮುಖ ಇಂಟರ್‌ಚೇಂಜ್ ಆಗಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್, ನಾಲ್ಕು ದಿಕ್ಕುಗಳ ಕಡೆಗೆ – ವೈಟ್‌ಫೀಲ್ಡ್, ಚಲ್ಲಘಟ್ಟ, ಮಾದವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ – ಬೆಳಗಿನ ಜಾವ 2.45 ಕ್ಕೆ ಕೊನೆಯ ರೈಲು ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಇದನ್ನೂ ಓದಿ: ಕೋಗಿಲು ಲೇಔಟ್ ನಿವಾಸಿಗಳಿಗೆ ಕೂಡಲೇ ಮೂಲ ಸೌಕರ್ಯಗಳೊಂದಿಗೆ ಪುನರ್‌ವಸತಿ ಕಲ್ಪಿಸಿಕೊಡಿ | ಡಾ. ನಾಗಲಕ್ಷ್ಮೀ ಚೌಧರಿ ಮನವಿ


















