ಬೆಂಗಳೂರು | ಪ್ರೀತಿಯ ಹೆಸರಲ್ಲಿ ಯುವತಿಗೆ ಲೈಂಗಿಕ, ಮಾನಸಿಕ ಹಾಗೂ ವಂಚನೆ ಎಸಗಿ, ಕೊನೆಗೆ ಮೋಸ ಮಾಡಿದ ಆರೋಪಿಯೊಬ್ಬನನ್ನು ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶುಭಾಂಶು ಶುಕ್ಲ (27) ಬಂಧಿತ ಆರೋಪಿ.

ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಭಾರೀ ವಂಚನೆ ಆರೋಪ ಎದುರಿಸುತ್ತಿದ್ದಾನೆ. ಸಂತ್ರಸ್ತ ಯುವತಿ ಮತ್ತು ಆರೋಪಿ ಕುಟುಂಬಸ್ಥರ ಪರಿಚಯದ ಮೂಲಕ ಪರಿಚಿತರಾಗಿದ್ದರು. ಆರಂಭದಲ್ಲಿ ಅತ್ಯಂತ ಸಂಯಮ, ವಿಶ್ವಾಸ ಹಾಗೂ ಪ್ರಾಮಾಣಿಕ ವ್ಯಕ್ತಿಯಂತೆ ನಟಿಸಿದ್ದ ಶುಭಾಂಶು, ಯುವತಿಯ ಮನೆಯವರಿಗೆ ಮನೆಯ ಮಗನಂತೆ ಪರಿಚಯ ಮಾಡಿಕೊಂಡಿದ್ದ. ಆಗಾಗ ಯುವತಿಯ ಮನೆಗೆ ಬಂದು ಹೋಗುತ್ತಿದ್ದ ಆರೋಪಿ, ಕುಟುಂಬಸ್ಥರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದ ಎನ್ನಲಾಗಿದೆ.
ಪ್ರೀತಿ ಹೆಸರಿನಲ್ಲಿ ಯುವತಿಯ ನಂಬಿಕೆಯನ್ನು ಸಂಪೂರ್ಣವಾಗಿ ಗೆದ್ದ ಶುಭಾಂಶು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಲಿವಿಂಗ್ ರಿಲೇಷನ್‌ಶಿಪ್‌ಗೆ ಮುಂದಾಗಿದ್ದಾನೆ. ಪೋಷಕರಿಗೆ ಕೆಲಸದ ನಿಮಿತ್ತ ಮುಂಬೈಗೆ ತೆರಳುತ್ತಿರುವುದಾಗಿ ಸುಳ್ಳು ಹೇಳಿ, ಬೆಂಗಳೂರಿನ ಖಾಸಗಿ ಫ್ಲಾಟ್‌ನಲ್ಲಿ ಯುವತಿಯೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸವಾಗಿದ್ದ ಎನ್ನಲಾಗಿದೆ.

ಈ ಅವಧಿಯಲ್ಲಿ ಹಂತ ಹಂತವಾಗಿ ಯುವತಿಯ ಬಳಿ ಸುಮಾರು 75 ಲಕ್ಷ ರೂಪಾಯಿ ಹಣವನ್ನು ವಿವಿಧ ಕಾರಣಗಳನ್ನು ನೀಡಿ ಪಡೆದುಕೊಂಡಿದ್ದಾನೆ. ವ್ಯವಹಾರ, ಉದ್ಯೋಗ, ಕುಟುಂಬ ಸಮಸ್ಯೆ, ಭವಿಷ್ಯದ ಯೋಜನೆಗಳು ಎಂದು ಹೇಳಿ ಹಣ ಪಡೆದಿದ್ದ ಶುಭಾಂಶು, ನಂತರ ಆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿಗೆ ಬೇರೆ ಮದುವೆ ಸುದ್ದಿ?
ಈ ನಡುವೆ, ಶುಭಾಂಶುಗೆ ಈಗಾಗಲೇ ಬೇರೆ ಮದುವೆಯಾಗಿರುವ ವಿಷಯ ಯುವತಿಗೆ ತಿಳಿದುಬಂದಿದೆ. ಈ ಕುರಿತು ಪ್ರಶ್ನಿಸಿದಾಗ, ತನ್ನ ಮೊದಲ ಪತ್ನಿಗೆ ಡಿವೋರ್ಸ್ ಕೊಡಿಸುತ್ತಿದ್ದೇನೆ ಎಂದು ಸುಳ್ಳು ಭರವಸೆ ನೀಡಿದ್ದಾನೆ. ಆದರೆ ಸಮಯ ಕಳೆದಂತೆ ಆತನ ವರ್ತನೆ ಸಂಪೂರ್ಣ ಬದಲಾಗಿದ್ದು, ಯುವತಿಯ ಮೇಲೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದಾನೆ ಎನ್ನಲಾಗಿದೆ.
ಪ್ರತಿದಿನವೂ ಅವಮಾನ, ಬೆದರಿಕೆ, ಹಿಂಸೆ ಅನುಭವಿಸುತ್ತಿದ್ದ ಯುವತಿ, ಕೊನೆಗೆ ಅಲ್ಲಿಂದ ಓಡಿ ಬಂದು ತನ್ನ ಮನೆಯವರ ಬಳಿ ಆಶ್ರಯ ಪಡೆದಿದ್ದಾಳೆ. ಮನೆಗೆ ಬಂದ ಬಳಿಕ ನಡೆದ ಎಲ್ಲ ವಿಚಾರಗಳನ್ನು ಕುಟುಂಬಸ್ಥರಿಗೆ ವಿವರಿಸಿದ್ದಾಳೆ. ವಿಷಯ ತಿಳಿದ ಕುಟುಂಬಸ್ಥರು ಕೂಡಲೇ ಪೊಲೀಸರ ಮೊರೆ ಹೋಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿ ಶುಭಾಂಶು ಶುಕ್ಲನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ, ವಂಚನೆ, ನಂಬಿಕೆ ಭಂಗ ಸೇರಿ ಗಂಭೀರ ಆರೋಪಗಳು ದಾಖಲಾಗಿವೆ ಎಂದ ಪೊಲೀಸರು ತಿಳಿಸಿದ್ದಾರೆ. ಪ್ರೀತಿಯ ಹೆಸರಿನಲ್ಲಿ ನಡೆಯುವ ಇಂತಹ ಮೋಸಗಳು ಯುವತಿಯರ ಬದುಕನ್ನೇ ನಾಶ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ದಾದಾ ಕೋಚಿಂಗ್ ಅಭಿಯಾನಕ್ಕೆ ಸೋಲಿನ ಆಘಾತ: ಗಂಗೂಲಿ ಸಾರಥ್ಯದ ಪ್ರಿಟೋರಿಯಾ ಕ್ಯಾಪಿಟಲ್ಸ್‌ಗೆ ಸೋಲು



















