ನವದೆಹಲಿ: ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟ ಮತ್ತು ವರ್ತನೆಗೆ ಹೆಸರಾಗಿರುವ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಮೈದಾನದ ಹೊರಗೆ ತಮ್ಮ ಸಂಯಮದ ಮೂಲಕ ಸುದ್ದಿಯಾಗಿದ್ದಾರೆ. ಸೆಲ್ಫಿ ನೀಡಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ಹಾರ್ದಿಕ್ ಅವರನ್ನು ಸಾರ್ವಜನಿಕವಾಗಿ ನಿಂದಿಸಿದ್ದು, ಈ ವೇಳೆ ಹಾರ್ದಿಕ್ ತೋರಿದ ಶಾಂತ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹಿಕಾ ಶರ್ಮಾ ಅವರೊಂದಿಗೆ ನವದೆಹಲಿಯ ಹೋಟೆಲ್‌ವೊಂದಕ್ಕೆ ಊಟಕ್ಕೆ ತೆರಳಿದ್ದರು. ಭೋಜನ ಮುಗಿಸಿ ಹೋಟೆಲ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ದಂಡೇ ಅವರನ್ನು ಸುತ್ತುವರಿದಿದೆ. ಈ ವೇಳೆ ಹಾರ್ದಿಕ್ ಕೆಲವೊಂದು ಅಭಿಮಾನಿಗಳೊಂದಿಗೆ ತಾಳ್ಮೆಯಿಂದಲೇ ಪೋಟೋಗೆ ಪೋಸ್ ನೀಡಿದ್ದಾರೆ.
ಜನಸಂದಣಿ ಹೆಚ್ಚಾದ ಕಾರಣ ಭದ್ರತಾ ಸಿಬ್ಬಂದಿ ಅವರನ್ನು ಕಾರಿನತ್ತ ಕರೆದೊಯ್ದಿದ್ದಾರೆ. ಈ ನೂಕುನುಗ್ಗಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹಾರ್ದಿಕ್ ಜತೆ ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಹತಾಶನಾದ ಆ ವ್ಯಕ್ತಿ, ಹಾರ್ದಿಕ್ ಅವರನ್ನು ಹಿಂಬಾಲಿಸುತ್ತಾ, “ನರಕಕ್ಕೆ ಹೋಗು” (Go to hell) ಎಂದು ಜೋರಾಗಿ ನಿಂದಿಸಿದ್ದಾನೆ. ಈ ದೃಶ್ಯ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗಿದೆ.
ಹಾರ್ದಿಕ್ ಮೌನಕ್ಕೆ ಮೆಚ್ಚುಗೆ:
ಅಭಿಮಾನಿಯೊಬ್ಬ ಹೀಗೆ ಕಟುವಾಗಿ ನಿಂದಿಸಿದರೂ ಹಾರ್ದಿಕ್ ಪಾಂಡ್ಯ ಮಾತ್ರ ಕೊಂಚವೂ ವಿಚಲಿತರಾಗಲಿಲ್ಲ. ಹಿಂದಿರುಗಿ ನೋಡದೆ, ಆ ವ್ಯಕ್ತಿಯೊಂದಿಗೆ ಯಾವುದೇ ವಾಗ್ವಾದಕ್ಕೆ ಇಳಿಯದೆ, ಅತ್ಯಂತ ಗೌರವಯುತವಾಗಿ ಮೌನವಾಗಿಯೇ ಕಾರು ಹತ್ತಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಸೆಲೆಬ್ರಿಟಿಗಳು ಇಂತಹ ಮುಜುಗರದ ಪ್ರಸಂಗಗಳನ್ನು ಎದುರಿಸುವುದು ಸಹಜ. ಆದರೆ, ಹಾರ್ದಿಕ್ ಅದನ್ನು ನಿಭಾಯಿಸಿದ ರೀತಿ ಪ್ರಬುದ್ಧವಾಗಿತ್ತು ಎಂದು ನೆಟ್ಟಿಗರು ಮತ್ತು ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ.
ಮೈದಾನದಲ್ಲಿ ಅಬ್ಬರ:
ಒಂದೆಡೆ ಮೈದಾನದ ಹೊರಗೆ ಶಾಂತವಾಗಿರುವ ಹಾರ್ದಿಕ್, ಮೈದಾನದಲ್ಲಿ ಮಾತ್ರ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಅಂತಿಮ ಟಿ20 ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಭಾರತದ ಪರ ಎರಡನೇ ವೇಗದ ಟಿ20 ಅರ್ಧಶತಕದ ದಾಖಲೆ ಬರೆದಿದ್ದರು. ಅವರ ಆಟದ ನೆರವಿನಿಂದ ಭಾರತ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತ್ತು.
ಇದನ್ನೂ ಓದಿ : ಲಿಸ್ಟ್ ‘ಎ’ ಪದಾರ್ಪಣೆಯಲ್ಲೇ ವಿಶ್ವದಾಖಲೆ | ಜಾಂಟಿ ರೋಡ್ಸ್ ಹಿಂದಿಕ್ಕಿದ 24ರ ಹರೆಯದ ವಿಘ್ನೇಶ್ ಪುತ್ತೂರು!



















