ಶಿವಮೊಗ್ಗ:ಕಿಡಿಗೇಡಿಗಳು ಏಕಾಏಕಿ ಮೊಬೈಲ್ ಅಂಗಡಿಗೆ ನುಗ್ಗಿ ವ್ಯಕ್ತಿಯೊರ್ವನಿಗೆ ಚಾಕುವಿನಿಂದು ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದ ಬಳಿ ಸೋಮವಾರ ಸಂಜೆ ನಡೆದಿದೆ.
ಸೈಯದ್ ಬರ್ಕತ್ (32) ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ.ಅಮೀರ್ ಅಹಮದ್ ವೃತ್ತದ ಬಳಿಯ ಮೊಬೈಲ್ ಅಂಗಡಿಯಲ್ಲಿ ಮೆಕಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ಏಕಾಏಕಿ ಅಂಗಡಿಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳು, ಸೈಯದ್ ಬರ್ಕತ್ ಮೇಲೆ ದಾಳಿ ನಡೆಸಿ, ಚಾಕುವಿನಿಂದ ಇರಿದಿದ್ದಾರೆ.
ಬರ್ಕತ್‌ನ ಎದೆ, ಹೊಟ್ಟೆ, ಪಕ್ಕೆ ಹಾಗೂ ಕೈಗೆ ಚಾಕುವಿನಿಂದ ಇರಿತವಾಗಿದೆ. ಚಾಕು ಇರಿತ ತಡೆಯಲು ಹೋದಾ ವ್ಯಕ್ತಿಯ ಕೈ ಬೆರಳಿಗೂ ಸಹ ಗಾಯವಾಗಿದೆ. ಗಾಯಾಳುವನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ರೌಡಿಗಳ ಗುಂಪಿನ ನಡುವೆ ಇದ್ದ ಹಳೇ ವೈಷಮ್ಯವೇ ಈ ಚಾಕು ಇರಿತಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಗಾಯಾಳು ಬರ್ಕತ್ ಸಹೋದರ ಸೈಯದ್ ಅಜೀಜ್ ಮಾತನಾಡಿ, ಗಾಯಾಳು ಸೈಯದ್ ಬರ್ಕತ್ ನನ್ನ ಸಹೋದರ. ನಮ್ಮದು ಅಮೀರ್ ಅಹಮದ್ ವೃತ್ತದ ಬಳಿ ಮೊಬೈಲ್ ಅಂಗಡಿ ಇದೆ. ನಾನು ಅಂಗಡಿ ಓನರ್. ಇಲ್ಲಿ ನನ್ನ ತಮ್ಮ ಮೊಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಈತ ಅಂಗಡಿಯಲ್ಲಿ ಇದ್ದಾಗ ಇಬ್ಬರು ಬಂದು ಚಾಕು ಹಾಕಿದ್ದಾರೆ. ಚಾಕು ಇರಿತಕ್ಕೆ ಕಾರಣ ಗೂತ್ತಿಲ್ಲ. ಈತ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಇದ್ದವನು. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಚೆನ್ನಾಗಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ಸ್ಟೈಲ್‌ನಲ್ಲಿ ಪತ್ನಿ ಕೊಲೆ | ಅಪಘಾತವೆಂದು ಬಿಂಬಿಸಲು ಯತ್ನಿಸಿದ ಪತಿ ಕೆಲವೇ ಕ್ಷಣದಲ್ಲಿ ಅರೆಸ್ಟ್..!



















