ಢಾಕಾ: ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ರಾಜಕೀಯ ಅಶಾಂತಿಯ ಮಧ್ಯೆ ಧಾರ್ಮಿಕ ಹಿಂಸಾಚಾರವೂ ಉಲ್ಬಣಗೊಂಡಿದೆ. ಗುರುವಾರ ರಾತ್ರಿ, ಮೈಮೆನ್ಸಿಂಗ್ ಜಿಲ್ಲೆಯ ಭಾಲುಕ ಉಪಜಿಲ್ಲೆಯ ದುಬಾಲಿಯಾ ಪಾರಾ ಪ್ರದೇಶದಲ್ಲಿ ಹಿಂದೂ ಯುವಕನೊಬ್ಬನನ್ನು ಜನಸಮೂಹ ಹಲ್ಲೆ ಮಾಡಿ ಜೀವಂತವಾಗಿ ಸುಟ್ಟು ಕೊಂದ ಘಟನೆ ದೇಶದಾದ್ಯಂತ ಆತಂಕ ಹುಟ್ಟಿಸಿದೆ.
ಮೃತನನ್ನು ದೀಪು ಚಂದ್ರ ದಾಸ್ ಎಂದು ಗುರುತಿಸಲಾಗಿದ್ದು, ಈತ ಸ್ಥಳೀಯ ಜವಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಾತ್ರಿ 9 ಗಂಟೆಯ ವೇಳೆಗೆ ದೀಪು ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆಂಬ ವದಂತಿ ವ್ಯಾಪಿಸಿದ್ದು, ಆಕ್ರೋಶಗೊಂಡ ಸ್ಥಳೀಯರು ಅವರನ್ನು ಕಂಬಕ್ಕೆ ಕಟ್ಟಿ ಹಾಕಿ, ಕ್ರೂರವಾಗಿ ಹಿಂಸಿಸಿ ನಂತರ ದೇಹಕ್ಕೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ದೀಪು ಮೃತಪಟ್ಟಿದ್ದರು.
ಶರೀಫ್ ಒಸ್ಮಾನ್ ಹಾದಿ ಸಾವಿನ ಹಿನ್ನೆಲೆಯಲ್ಲಿ ಸ್ಫೋಟಗೊಂಡ ಹಿಂಸಾಚಾರದ ಭಾಗವಾಗಿ ಈ ಹತ್ಯೆಯೂ ನಡೆದಿದೆ. ಹಾದಿ, ಕಳೆದ ವಾರ ಚುನಾವಣಾ ಪ್ರಚಾರ ಆರಂಭಿಸುವ ವೇಳೆ ಅಪರಿಚಿತ ದಾಳಿಕೋರರು ಅವರ ಮೇಲೆ ಗುಂಡು ಹಾರಿಸಿದ್ದರು. 6 ದಿನದ ಚಿಕಿತ್ಸೆ ಬಳಿಕ ಸಿಂಗಾಪುರದಲ್ಲಿ ಗುರುವಾರ ರಾತ್ರಿ ಅವರು ನಿಧನರಾಗಿದ್ದು, ಅದರ ಬೆನ್ನಲ್ಲೇ ದೇಶವ್ಯಾಪಿ ಹಿಂಸಾತ್ಮಕ ಪ್ರತಿಭಟನೆಗಳು ಆರಂಭವಾಗಿವೆ.
ಚಿತ್ತಗಾಂಗ್‌ನಲ್ಲಿ ಭಾರತೀಯ ಹೈಕಮಿಷನರ್ ಮನೆಗೂ ಕಲ್ಲೆಸೆತ
ತೀವ್ರ ಆಕ್ರೋಶದ ಮಧ್ಯೆ ಚಿತ್ತಗಾಂಗ್‌ನಲ್ಲಿ ರಾತ್ರಿ 1.30ರ ಸುಮಾರಿಗೆ ಭಾರತೀಯ ಸಹಾಯಕ ಹೈಕಮಿಷನರ್ ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದರು. ಯಾವುದೇ ಹಾನಿ ಸಂಭವಿಸದಿದ್ದರೂ, ಪೊಲೀಸರು ಅಶ್ರುವಾಯು ಹಾಗೂ ಲಾಠಿಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ. ಘಟನೆ ಸಂಬಂಧ ಸುಮಾರು 12 ಮಂದಿಯನ್ನು ಬಂಧಿಸಲಾಗಿದೆ.
ಧಾರ್ಮಿಕ ಅಸಹಿಷ್ಣುತೆ ಕುರಿತ ಖಂಡನೆ
ಈ ಹಿಂಸಾತ್ಮಕ ಘಟನೆಯನ್ನು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಕೂಡ ಖಂಡಿಸಿದ್ದು—“ಹಿಂದೂ ಎಂದು ಜನ್ಮ ಪಡೆದವರು ಬಾಂಗ್ಲಾದೇಶದಲ್ಲಾಗಲಿ ಅಥವಾ ಪಶ್ಚಿಮ ಬಂಗಾಳದಲ್ಲಾಗಲಿ ಈಗ ಜೀವ ಕಳೆದುಕೊಳ್ಳುತ್ತಿದ್ದಾರೆ. ದೀಪು ಚಂದ್ರ ದಾಸ್ ಅವರ ಹತ್ಯೆ ಅಲ್ಲಿನ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ನಿದರ್ಶನ” ಎಂದು ಹೇಳಿದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಅರಾಜಕತೆ : ಪತ್ರಿಕಾ ಕಚೇರಿಗಳಿಗೆ ಬೆಂಕಿ, 30 ಪತ್ರಕರ್ತರ ಸಾಹಸಮಯ ರಕ್ಷಣೆ



















