ಗುವೈಬಾ (ಬ್ರೆಜಿಲ್): ಬ್ರೆಜಿಲ್‌ನ ಗುವೈಬಾ ನಗರದಲ್ಲಿ ಬೀಸಿದ ಭಾರಿ ಬಿರುಗಾಳಿಗೆ ಸುಮಾರು 40 ಮೀಟರ್ ಎತ್ತರದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ‘ಯ ಪ್ರತಿರೂಪವು ಕುಸಿದು ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಬ್ರೆಜಿಲ್‌ನಲ್ಲಿ ಬೀಸಿದ ಬಿರುಗಾಳಿಯ ತೀವ್ರತೆಗೆ, ಹವಾನ್ ರಿಟೇಲ್ ಮೆಗಾಸ್ಟೋರ್‌ನ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಈ ಬೃಹತ್ ಪ್ರತಿಮೆ ತರಗೆಲೆಯಂತೆ ಉರುಳಿ ಬಿದ್ದಿದೆ. ಬಲವಾದ ಗಾಳಿಯ ರಭಸಕ್ಕೆ ಸಿಲುಕಿದ ಪ್ರತಿಮೆ ಮೊದಲಿಗೆ ವಾಲಿದ್ದು, ನಂತರ ನೆಲಕ್ಕೆ ಅಪ್ಪಳಿಸಿ ತುಂಡಾಗಿದೆ. ಬಿದ್ದ ರಭಸಕ್ಕೆ ಪ್ರತಿಮೆಯ ತಲೆ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
114 ಅಡಿ ಎತ್ತರದ ಪ್ರತಿಮೆ:
ಕುಸಿದು ಬಿದ್ದ ಈ ಪ್ರತಿರೂಪವು ಸುಮಾರು 114 ಅಡಿ (ಸುಮಾರು 40 ಮೀಟರ್) ಎತ್ತರವಿತ್ತು. ಹವಾನ್ ಮಳಿಗೆಯ ಅಧಿಕಾರಿಗಳ ಪ್ರಕಾರ, ಪ್ರತಿಮೆಯ ಮೇಲ್ಭಾಗದ 24 ಮೀಟರ್ (78 ಅಡಿ) ಭಾಗ ಮಾತ್ರ ಕುಸಿದಿದ್ದು, 11 ಮೀಟರ್ (36 ಅಡಿ) ಎತ್ತರದ ಪೀಠವು ಹಾಗೆಯೇ ಉಳಿದುಕೊಂಡಿದೆ. 2020ರಲ್ಲಿ ಮಳಿಗೆ ಆರಂಭವಾದಾಗ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು ಮತ್ತು ಇದಕ್ಕೆ ಅಗತ್ಯವಾದ ತಾಂತ್ರಿಕ ಪ್ರಮಾಣೀಕರಣವೂ ಇತ್ತು ಎಂದು ಕಂಪನಿ ಸ್ಪಷ್ಟಪಡಿಸಿದೆ.
ತಪ್ಪಿದ ಭಾರೀ ಅನಾಹುತ:
ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಆ ಸಮಯದಲ್ಲಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಘಟನೆ ನಡೆದ ತಕ್ಷಣ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದ್ದು, ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಗುವೈಬಾ ಮೇಯರ್ ಮಾರ್ಸೆಲೊ ಮರಾನಾಟಾ ಖಚಿತಪಡಿಸಿದ್ದಾರೆ.
ಹವಾಮಾನ ವೈಪರೀತ್ಯ:
ರಿಯೊ ಗ್ರಾಂಡೆ ಡೊ ಸುಲ್ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಗಾಳಿ ಬೀಸುತ್ತಿದ್ದು, ಹಲವೆಡೆ ಆಲಿಕಲ್ಲು ಮಳೆ, ಮರಗಳು ಧರೆಗುರುಳಿರುವುದು ಮತ್ತು ವಿದ್ಯುತ್ ಕಡಿತದ ವರದಿಗಳಾಗಿವೆ. ರಾಷ್ಟ್ರೀಯ ಹವಾಮಾನ ಸಂಸ್ಥೆಯು ಇನ್ನೂ ಎಚ್ಚರಿಕೆ ನೀಡಿದ್ದು, ಗಾಳಿಯ ವೇಗ ಗಂಟೆಗೆ 100 ಕಿ.ಮೀ ವರೆಗೆ ತಲುಪುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನವೇ ಸಂಚಲನ : ಮತದಾರರ ಪಟ್ಟಿಯಿಂದ 58 ಲಕ್ಷ ಹೆಸರುಗಳು ಡಿಲೀಟ್!



















