ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಆರ್ ಪಿಎಫ್ (RPF) ಸಿಬ್ಬಂದಿ ಮೇಲೆ ಪುಂಡರ ಗ್ಯಾಂಗ್‌ಯೊಂದು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಸೋಮವಾರ ಯಶವಂತಪುರ ರೈಲು ನಿಲ್ದಾಣದಲ್ಲಿ ಗೋವಾಕ್ಕೆ ಹೋಗುವ ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲಿನ ಚೈನ್ ಅನ್ನು ಪದೇ ಪದೇ ಎಳೆದು, ಮದ್ಯದ ಅಮಲಿನಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವ ಮೂಲಕ ಗಲಾಟೆ ಸೃಷ್ಟಿಸಿದ ಮೂವರು ವ್ಯಕ್ತಿಗಳನ್ನು ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ.
ಕುಡಿದ ನಶೆಯಲ್ಲಿ ಪದೇ ಪದೇ ಚೈನ್ ಎಳೆದು ಕೆಲ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಚೈನ್ ಎಳೆದಿದ್ದನ್ನು ಪ್ರಶ್ನೆ ಮಾಡಿದ್ದ ಆರ್‌ಪಿಎಫ್ ಸಿಬ್ಬಂದಿ ಮೇಲೆ ಪುಂಡರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲು ಸಂಖ್ಯೆ 17309 ಹೊರಡುವ ಸಮಯದಲ್ಲಿ, ಎಸ್ 3 ಕೋಚ್‌ನಲ್ಲಿ ಪುಂಡರ ಗ್ಯಾಂಗ್ ಚೈನ್ ಎಳೆಯುತ್ತಿರುವುದು ಕಂಡುಬಂದಿದೆ. ಈ ವೇಳೆ ಪ್ಲಾಟ್‌ಫಾರ್ಮ್‌ನಲ್ಲಿ ನಿಯೋಜಿಸಲಾದ ಆರ್‌ಪಿಎಫ್ ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಲು ಕೋಚ್‌ಗೆ ಧಾವಿಸಿದರು. ವಿಚಾರಣೆಯ ಸಮಯದಲ್ಲಿ, ಒಟ್ಟಿಗೆ ಪ್ರಯಾಣಿಸುತ್ತಿದ್ದ 14 ಪ್ರಯಾಣಿಕರ ಗುಂಪು ಆರ್ ಪಿಎಫ್ ಸಿಬ್ಬಂದಿ ಮೇಲೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.



















