ಜೈಪುರ: ಸಾಮಾನ್ಯವಾಗಿ ದೇವಾಲಯಗಳಿಗೆ ಹೋದಾಗ ನಮಗೆಲ್ಲರಿಗೂ ಏನು ಕಾಣಸಿಗುತ್ತದೆ? ದೇವರ, ದೇವಿಯರ ಮೂರ್ತಿಗಳು ಅಲ್ಲವೇ? ಆ ದೇವರ ಮೂರ್ತಿಗಳಿಗೆ ಕೈಮುಗಿಯುವುದು ವಾಡಿಕೆ. ಆದರೆ, ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ದೇವಾಲಯವೊಂದರಲ್ಲಿ ದೇವರ ವಿಗ್ರಹದ ಬದಲು 350 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗೆ ಪೂಜೆ ಸಲ್ಲಿಸಲಾಗುತ್ತದೆ! ಕೇಳಲು ಆಶ್ಚರ್ಯವಾದರೂ ಇದು ಸತ್ಯ. ಇಲ್ಲಿನ ಜನರು ಇದನ್ನು ‘ಬುಲೆಟ್ ಬಾಬಾ ದೇವಾಲಯ’ ಎಂದೇ ಕರೆಯುತ್ತಾರೆ.
ಇದರ ಹಿಂದಿನ ರೋಚಕ ಕಥೆ ಏನು?
ಈ ದೇವಾಲಯದ ಇತಿಹಾಸವು ಓಂ ಸಿಂಗ್ ರಾಥೋಡ್ ಎಂಬುವವರ ಕಥೆಯೊಂದಿಗೆ ಬೆಸೆದುಕೊಂಡಿದೆ. 1988ರಲ್ಲಿ ಓಂ ಸಿಂಗ್ ಅವರು ಇದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದರು. ದುರದೃಷ್ಟವಶಾತ್ ಅವರು ಸ್ಥಳದಲ್ಲೇ ಮೃತಪಟ್ಟರು.
ಅಪಘಾತದ ನಂತರ ಪೊಲೀಸರು ಬೈಕ್ ಅನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದರು. ಆದರೆ, ಮಾರನೇ ದಿನ ನೋಡುವಾಗ ಠಾಣೆಯಲ್ಲಿದ್ದ ಬೈಕ್ ನಾಪತ್ತೆಯಾಗಿತ್ತು. ಹುಡುಕಾಡಿದಾಗ ಅದು ಅಪಘಾತ ನಡೆದ ಸ್ಥಳದಲ್ಲೇ ಪತ್ತೆಯಾಗಿತ್ತು! ಪೊಲೀಸರು ಮತ್ತೆ ಬೈಕ್ ತಂದು, ಇಂಧನ ಖಾಲಿ ಮಾಡಿ ಸರಪಳಿಯಿಂದ ಕಟ್ಟಿಹಾಕಿದರು. ಆದರೂ, ಆ ಬೈಕ್ ಮತ್ತೆ ಮಾಯವಾಗಿ ಅಪಘಾತದ ಸ್ಥಳದಲ್ಲೇ ಪ್ರತ್ಯಕ್ಷವಾಯಿತು. ಈ ಪವಾಡ ಸದೃಶ ಘಟನೆ ಹಲವು ಬಾರಿ ನಡೆಯಿತು ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಯಾಣಿಕರ ನಂಬಿಕೆ
ಅಂತಿಮವಾಗಿ, ಗ್ರಾಮಸ್ಥರು ಓಂ ಸಿಂಗ್ ಅವರ ಸ್ಮರಣಾರ್ಥವಾಗಿ ಅಪಘಾತ ನಡೆದ ಸ್ಥಳದಲ್ಲೇ ದೇವಾಲಯ ನಿರ್ಮಿಸಿ ಬೈಕ್ ಅನ್ನು ಅಲ್ಲಿಯೇ ಸ್ಥಾಪಿಸಿದರು. ಈಗ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಲಾರಿ ಚಾಲಕರು ಇಲ್ಲಿ ನಿಲ್ಲಿಸಿ, ಬುಲೆಟ್ ಬಾಬಾನಿಗೆ ನಮಸ್ಕರಿಸಿಯೇ ಮುಂದೆ ಹೋಗುತ್ತಾರೆ. ಇಲ್ಲಿ ಪೂಜೆ ಸಲ್ಲಿಸದೆ ಹೋದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಸ್ಥಳೀಯರ ಬಲವಾದ ನಂಬಿಕೆ.
ಇಲ್ಲಿನ ಮತ್ತೊಂದು ವಿಶೇಷವೆಂದರೆ, ಭಕ್ತರು ದೇವರಿಗೆ ಹೂವು, ಹಾರಗಳ ಜೊತೆಗೆ ಮದ್ಯದ ಬಾಟಲಿಗಳನ್ನು ಕೂಡ ಅರ್ಪಿಸುತ್ತಾರೆ. ರಾತ್ರಿ ವೇಳೆ ಓಂ ಸಿಂಗ್ ಅವರ ಆತ್ಮವು ತೊಂದರೆಯಲ್ಲಿರುವ ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ ಎಂದು ಜನರು ಈಗಲೂ ನಂಬುತ್ತಾರೆ.
ಇದನ್ನೂ ಓದಿ: ಬೆಂಗಳೂರು | ಅಯೋಧ್ಯೆಯ ರಾಮಭಕ್ತನಿಗೆ ಮಹಾ ದೋಖಾ.. ಷೇರು ಮಾರುಕಟ್ಟೆ ಹೆಸರಲ್ಲಿ 8 ಕೋಟಿ ರೂ. ವಂಚಿಸಿದ ಸೈಬರ್ ಚೋರರು!



















