ನವದೆಹಲಿ: ರೋಹಿತ್ ಶರ್ಮಾ ಮತ್ತು ಪ್ರಸ್ತುತ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟೀಮ್ ಇಂಡಿಯಾ ವಿಶ್ವದ ಬಲಿಷ್ಠ ಟಿ20 ತಂಡವಾಗಿ ಹೊರಹೊಮ್ಮಿದೆ. 2024ರ ಟಿ20 ವಿಶ್ವಕಪ್ ಗೆದ್ದಿರುವ ಭಾರತ, ದ್ವಿಪಕ್ಷೀಯ ಸರಣಿಗಳಲ್ಲೂ ಅಬ್ಬರಿಸಿದೆ. ಆದರೆ, ಮುಂಬರುವ 2026ರ ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ, ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳುತ್ತಿರುವ ಕೆಲವು ನಿರ್ಧಾರಗಳು ತಂಡಕ್ಕೆ ಮುಳುವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ವಿಶ್ವಕಪ್‌ಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ, ಪ್ರಶಸ್ತಿ ಉಳಿಸಿಕೊಳ್ಳಬೇಕಾದರೆ ಟೀಮ್ ಇಂಡಿಯಾ ಈ ಕೆಳಗಿನ 6 ಪ್ರಮುಖ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿಕೊಳ್ಳಬೇಕಿದೆ:
- ಶುಭಮನ್ ಗಿಲ್ ಟಿ20ಗೆ ಸೂಕ್ತವೇ?
ಶುಭಮನ್ ಗಿಲ್ ಅದ್ಭುತ ಆಟಗಾರನಾಗಿದ್ದರೂ, ಪ್ರಸ್ತುತ ಟಿ20 ಸೆಟಪ್‌ಗೆ ಅವರು ಹೊಂದಿಕೊಳ್ಳುತ್ತಿಲ್ಲ ಎಂಬ ಭಾವನೆ ಮೂಡಿದೆ. 2025ರಲ್ಲಿ ಅವರ ಪ್ರದರ್ಶನ ಸಾಧಾರಣಕ್ಕಿಂತ ಕೆಳಗಿದೆ. ಈ ವರ್ಷ ಅವರು ಒಂದೂ ಅರ್ಧಶತಕ ಗಳಿಸಿಲ್ಲ ಹಾಗೂ ಕೇವಲ 263 ರನ್ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಕ್ರಮಣಕಾರಿ ಆಟಗಾರರ ಸ್ಥಾನವನ್ನು ಗಿಲ್ ಆಕ್ರಮಿಸಿಕೊಂಡಿದ್ದಾರೆ. ಪ್ರತಿ ಬಾರಿ ಅವರು ವಿಫಲರಾದಾಗಲೂ ತಂಡದ ಇತರೆ ಆಟಗಾರರ ಮೇಲೆ ಒತ್ತಡ ಹೆಚ್ಚುತ್ತಿದೆ. - ಸಂಜು ಸ್ಯಾಮ್ಸನ್ ಕಡೆಗಣನೆ ಅಚ್ಚರಿ
ಸಂಜು ಸ್ಯಾಮ್ಸನ್ ಅವರಂತಹ ಪ್ರತಿಭಾವಂತ ಆಟಗಾರನನ್ನು ತಂಡದಲ್ಲಿಟ್ಟುಕೊಂಡು ಬೆಂಚ್ ಕಾಯಿಸುವುದು ‘ಕ್ರಿಮಿನಲ್’ ನಿರ್ಧಾರದಂತಿದೆ. ಅವರನ್ನು ಆರಂಭದಲ್ಲಿ ಮಧ್ಯಮ ಕ್ರಮಾಂಕಕ್ಕೆ ತಳ್ಳಲಾಯಿತು, ಇದೀಗ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಬೆಂಚ್‌ಗೆ ಸೀಮಿತಗೊಳಿಸಲಾಗಿದೆ. ಅವರನ್ನು ಫಿನಿಶರ್ ಆಗಿ ಗುರುತಿಸಿಕೊಂಡಿರುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮೂಲಕ ಬದಲಾಯಿಸಿರುವುದು ತರ್ಕಬದ್ಧವಾಗಿ ಕಾಣುತ್ತಿಲ್ಲ. - ಅಕ್ಷರ್ ಪಟೇಲ್ ಅವರನ್ನು ‘ಫ್ಲೋಟರ್’ ಮಾಡಿದ್ದು
ಆಲ್‌ರೌಂಡರ್ ಅಕ್ಷರ್ ಪಟೇಲ್ ತಂಡಕ್ಕೆ ಆಸ್ತಿ. ಆದರೆ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿನ ಅಸ್ಥಿರತೆ ಸಮಸ್ಯೆಯಾಗಿದೆ. ಒಂದು ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬಂದರೆ, ಮತ್ತೊಂದರಲ್ಲಿ 7 ಅಥವಾ 8ನೇ ಕ್ರಮಾಂಕದಲ್ಲಿ ಬರುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 211 ರನ್ ಚೇಸಿಂಗ್ ವೇಳೆ ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರಿಗಿಂತ ಮೊದಲು ಅಕ್ಷರ್ ಅವರನ್ನು ಕಳುಹಿಸಿದ್ದು ತಪ್ಪು ನಿರ್ಧಾರವಾಗಿತ್ತು. - ಕುಲದೀಪ್ ಯಾದವ್‌ಗೆ ನ್ಯಾಯ ಸಿಗಲಿ
ಕುಲದೀಪ್ ಯಾದವ್ ಅವರಂತಹ ಮ್ಯಾಚ್ ವಿನ್ನಿಂಗ್ ಬೌಲರ್‌ನನ್ನು ಯಾವುದೇ ಪಂದ್ಯದಲ್ಲಿ ಬೆಂಚ್ ಕಾಯಿಸಬಾರದು. 49 ಪಂದ್ಯಗಳಲ್ಲಿ 88 ವಿಕೆಟ್ (ಸ್ಟೈಕ್ ರೇಟ್ 11.7) ಪಡೆದಿರುವ ಅವರಿಗೆ ಖಾಯಂ ಸ್ಥಾನ ನೀಡಬೇಕು. ಕಳೆದ 10 ಪಂದ್ಯಗಳಲ್ಲಿ ಅವರು 19 ವಿಕೆಟ್ ಪಡೆದಿದ್ದರೂ ಅವರಿಗೆ ಸ್ಥಿರ ಅವಕಾಶ ನೀಡುತ್ತಿಲ್ಲ. - ನಿತೀಶ್ ಕುಮಾರ್ ರೆಡ್ಡಿ (NKR) ಬಳಕೆ ಸರಿಯಾಗುತ್ತಿಲ್ಲ
ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಆಡುವಾಗ ಅವರಿಗೆ ಬೌಲಿಂಗ್ ಮಾಡಲು ಸಾಕಷ್ಟು ಅವಕಾಶ ನೀಡುತ್ತಿಲ್ಲ. 4 ಪಂದ್ಯಗಳಲ್ಲಿ 90 ರನ್ ಮತ್ತು 3 ವಿಕೆಟ್ ಪಡೆದಿದ್ದರೂ, ಅವರು ಇಲ್ಲಿಯವರೆಗೆ ಬೌಲ್ ಮಾಡಿದ್ದು ಕೇವಲ 9 ಓವರ್‌ಗಳು ಮಾತ್ರ. ಅವರನ್ನು ಕೇವಲ ಹಾರ್ದಿಕ್ ಪಾಂಡ್ಯ ಅಥವಾ ಶಿವಂ ದುಬೆ ಅವರ ಬದಲಿ ಆಟಗಾರನಂತೆ ನೋಡದೆ, ಅವರ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳಬೇಕಿದೆ. - ವೇಗಿಗಳ ಬಲವರ್ಧನೆ ಎಲ್ಲಿ?
ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ಅಲಭ್ಯರಾದರೆ ಭಾರತದ ಬೌಲಿಂಗ್ ಕಥೆಯೇನು? ಹರ್ಷಿತ್ ರಾಣಾ ಮೂರನೇ ವೇಗಿಯಾಗಿ ಗುರುತಿಸಿಕೊಂಡಿದ್ದರೂ, ಉಳಿದ ಇಬ್ಬರು ವೇಗಿಗಳಂತೆ ವಿಕೆಟ್ ತೆಗೆಯುವ ಸಾಮರ್ಥ್ಯವನ್ನು ಇನ್ನೂ ಪ್ರದರ್ಶಿಸಿಲ್ಲ. ವಿಶ್ವಕಪ್‌ಗೆ ಇನ್ನು ಕೇವಲ 9 ಪಂದ್ಯಗಳು ಬಾಕಿ ಇರುವಾಗ ಭಾರತ ತನ್ನ ಮೂರನೇ ಪ್ರಬಲ ವೇಗಿಯನ್ನು ಅಂತಿಮಗೊಳಿಸಬೇಕಿದೆ.
ಇದನ್ನೂ ಓದಿ: ಸಂಜು ಸ್ಯಾಮ್ಸನ್ ಬೆಂಚ್ ಕಾಯುತ್ತಿರುವುದು ನೋವಿನ ಸಂಗತಿ : ಮಾಜಿ ಕ್ರಿಕೆಟಿನಗ ಅಸಮಾಧಾನ


















